ಪಾಪಿ ಪಾಕಿಸ್ತಾನ ಜಾಧವ್, ತಾಯಿ, ಪತ್ನಿಗಷ್ಟೇ ಅಲ್ಲ ಇಡೀ ದೇಶಕ್ಕೆ ಅವಮಾನ ಮಾಡಿದೆ
ದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಬಂಧಿತನಾಗಿ ಪಾಕಿಸ್ತಾನ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡುವ ವೇಳೆ ಜಾಧವ್ ಪತ್ನಿ ಮತ್ತು ತಾಯಿಯನ್ನು ಅವಮಾನಿಸಿರುವುದನ್ನು ಇಂದು ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಖಂಡಿಸಿ, ಇದು ಜಾಧವ್ ತಾಯಿ ಮತ್ತು ಪತ್ನಿಗೆ ಮಾಡಿದ ಅವಮಾನವಲ್ಲ ಇಡೀ ದೇಶಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಇಂದು ಬೆಳಗ್ಗೆ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ‘ಪಾಕಿಸ್ತಾನ ಸರ್ಕಾರ ಕುಲಭೂಷಣ್ ಜಾಧವ್ ಅವರನ್ನು ಕುಟುಂಬಸ್ಥರು ಭೇಟಿ ಮಾಡಲು ಅವಕಾಶ ನೀಡಿ, ಉತ್ತಮ ಬಾಂಧವ್ಯ ಬೆಳೆಸಲು ಮುನ್ನುಡಿ ಬರೆದಿತ್ತು. ಆದರೆ ಪಾಕಿಸ್ತಾನ ತನ್ನ ಹಳೆ ಚಾಳಿ ಮುಂದುವರಿಸಿದ್ದು, ಅದರಲ್ಲೂ ತನ್ನ ಹೀನ ಬುದ್ಧಿ ತೋರಿದೆ ಆಕ್ಷೇಪ ವ್ಯಕ್ತಪಡಿಸಿದರು.
ಭೇಟಿ ವೇಳೆ ಕುಲಭೂಷಣ್ ಜಾಧವ್ ಅವರ ತಾಯಿ ಮತ್ತು ಪತ್ನಿಯ ಕುಂಕುಮ ಅಳಿಸಿ, ಮಾಂಗಲ್ಯ ಸೂತ್ರ ತೆಗೆಸಿ, ಬಟ್ಟೆ ಬದಲಾಯಿಸಿ ದಾರ್ಷ್ಟ್ಯತನ ಮೆರೆದಿದೆ. ಈ ಮೂಲಕ ಕೋಟ್ಯಂತರ ಜನರ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಪಾಕಿಸ್ತಾನ ನಿಯಮ ಮೀರಿ ಜಾಧವ್ ಪತ್ನಿ ಮತ್ತು ತಾಯಿಯೊಂದಿಗೆ ವರ್ತಿಸಿದೆ. ಜಾಧವ್ ಧರಿಸಿದ ಶೂಗಳನ್ನು ಪಡೆಯುವ ಮೂಲಕ ಹೀನ ಸ್ಥಿತಿಗೆ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾಧವ್ ಜತೆ ಮಾತಾಡುವ ವೇಳೆ ಪಾಕಿಸ್ತಾನ ಸರ್ಕಾರ ಇಂಟರ್ಕಾಮ್ ಬಂದ ಮಾಡುವ ಮೂಲಕ ಮಾತನಾಡಲೂ ಕೂಡ ಅಡ್ಡಿ ಪಡಿಸಿದ್ದಾರೆ ಎಂದು ಜಾಧವ್ ತಾಯಿ ನನಗೆ ತಿಳಿಸಿದ್ದಾರೆ. ಸೌಭಾಗ್ಯವತಿಯರಾದ ಪತ್ನಿಯನ್ನು ವಿಧವೆಯಂತೆ ಜಾಧವ್ ಅವರ ಎದುರು ಬಿಟ್ಟಿದ್ದಾರೆ. ಅಂತಹ ಸ್ಥಿತಿಯಲ್ಲಿ ಜಾಧವ್ ಅವರನ್ನು ಅವರ ಪತ್ನಿ ಹೇಗೆ ನೋಡಬೇಕು ಎಂದು ಸುಷ್ಮಾ ಕೆಲ ಕ್ಷಣ ಗದ್ಗದಿತರಾದರು. ಇದನ್ನು ಭಾರತ ಸದಾ ಖಂಡಿಸುತ್ತದೆ. ಈ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪಾಕಿಸ್ತಾನದ ಪಾಷವಿ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಕುಲಭೂಷಣ್ ರನ್ನು ಭಾರತಕ್ಕೆ ಕರೆದುಕೊಂಡು ಬರಲಾಗುವುದು ಎಂದು ಮಾಹಿತಿ ನೀಡಿದರು.
Leave A Reply