ಇಸ್ಲಾಮಿಗೆ ಮತಾಂತರವಾಗಲು ಒಪ್ಪಲಿಲ್ಲ ಎಂದು ಸೊಸೆಯನ್ನೇ ಅತ್ಯಾಚಾರವೆಸಗಿ ಕೊಲೆ ಮಾಡಿದ ಮಾವ!
ರಾಂಚಿ: ದೇಶದಲ್ಲಿ ನಾಯಿಕೊಡೆಯಂತೆ ಲವ್ ಜಿಹಾದ್ ಪ್ರಕರಣಗಳು ಕೇಳಿಬರುತ್ತಿರುವ ಬೆನ್ನಲ್ಲೇ ಜಾರ್ಖಂಡ್ ನ ರಾಮಗಡ ಜಿಲ್ಲೆಯಲ್ಲಿ ಸೊಸೆ (ಮಗನ ಹೆಂಡತಿ) ಇಸ್ಲಾಮಿಗೆ ಮತಾಂತರವಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ವ್ಯಕ್ತಿ ತನ್ನ ಸಂಬಂಧಿಕರೊಂದಿಗೆ ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ, ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ನವೆಂಬರ್ 6ರಂದು ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಗಾರ್ನಾ ನದಿಯಲ್ಲಿ ಕೈ, ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಬಳಿಕ ಸಾವಿನ ಜಾಡು ಹಿಡಿದು ಹೊರಟ ಪೊಲೀಸರು ಮೊದಲು ಮಹಿಳೆಯ ಪತಿ ಆದಿಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆಗ ನಿಜಾಂಶ ಗೊತ್ತಾಗಿದೆ.
ಆದಿಲ್ ಹಾಗೂ ಮಹಿಳೆ ಪರಸ್ಪರ ಪ್ರೀತಿಸುತ್ತಿದ್ದು, ಯುವತಿಯ ಕುಟುಂಬಸ್ಥರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಆದಿಲ್ ಕುಟುಂಬಸ್ಥರು ಮಹಿಳೆಗೆ ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯಿಸಿದ್ದಾರೆ.
ಆದರೆ ಮಹಿಳೆ ಇದಕ್ಕೆ ಒಪ್ಪದ ಕಾರಣ ಆದಿಲ್ ಅಪ್ಪ ಹಾಗೂ ಆತನ ಚಿಕ್ಕಪ್ಪ ಸೇರಿ ಹಲವು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ನದಿಯಲ್ಲಿ ಬಿಸಾಕಿದ್ದಾರೆ ಎಂದು ಆದಿಲ್ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಮಹಿಳೆಯನ್ನು ತಾವೇ ಕೊಲೆ ಮಾಡಿ ನದಿಗೆ ಬಿಸಾಕಿದರೂ ಆದಿಲ್ ಕುಟುಂಬಸ್ಥರು ಆಕೆಗೆ ಬೇರೆ ಸಂಬಂಧವಿತ್ತು, ಓಡಿ ಹೋಗಿದ್ದಾಳೆ ಎಂದು ಜನರನ್ನು ದಾರಿತಪ್ಪಿಸಿದ್ದರು ಎಂದು ತಿಳಿದುಬಂದಿದೆ. ಆದಾಗ್ಯೂ ಮುಸ್ಲಿಂ ಕುಟುಂಬಸ್ಥರ ವಿರುದ್ಧ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply