ಸಿಟ್ಟಿಂಗ್ ಗೆ 1600 ರೂಪಾಯಿ ತೆಗೆದುಕೊಂಡು ಮೀನಿನೂಟ ಮಾಡಿ ಹೋದರೆ ಮಂಗಳೂರು ವಿವಿ ಉದ್ಧಾರವಾಗುತ್ತಾ!
ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಅಂದರೆ ಸಿಂಡಿಕೇಟ್ ಸದಸ್ಯರು ಒಟ್ಟು 24. ಕುಲಪತಿ ಭೈರಪ್ಪನವರು ಅದರ ಅಧ್ಯಕ್ಷರು. 24 ರಲ್ಲಿ ಆರು ಜನ ಸರಕಾರದ ನೇಮಕಾತಿ. ಇಬ್ಬರು ರಾಜ್ಯಪಾಲರ ನೇಮಕಾತಿ. ಉಳಿದವರೆಲ್ಲರು ಕುಲಪತಿಗಳ ಅಧೀನ ಅಧಿಕಾರಿಗಳು. ಅವರೆಲ್ಲ ಸಭೆಗೆ ಬರಲು ಕಷ್ಟವಿರುವವರು. ಬಂದವರಿಗೆಲ್ಲ 1600 ರೂಪಾಯಿ ಸಿಟ್ಟಿಂಗ್ ಫೀಸ್. ಬಂಗುಡೆ ಸಾರಿನ ಊಟ ಮಾಡಿ ಹೋಗುವುದು ಬಿಟ್ಟರೆ ಬೇರೆ ಟೆನ್ಷನ್ ಅವರು ಮಾಡುವುದಿಲ್ಲ. ಭೈರಪ್ಪನವರ ಎದುರಿಗೆ ನಿಂತು ಮಾತನಾಡಲು ಅವರಿಗೆ ಧೈರ್ಯ ಇಲ್ಲ. ಸರಕಾರದ ನೇಮಕಾತಿಯ ಆರು ಜನ ಮತ್ತು ರಾಜ್ಯಪಾಲರ ನೇಮಕಾತಿಯ ಇಬ್ಬರನ್ನು ಕುಲಪತಿಗಳು ಸಂಭಾಳಿಸಿದ್ದಾರೆ. ಅವರಿಗೆ ತಮಗೆ ಬೇಕಾದ ಒಂದೆರಡು ಕೆಲಸ ಮಾಡಿಕೊಟ್ಟರೆ ಸಾಕು. ಅವರು ತೃಪ್ತರಾಗುತ್ತಾರೆ ನಂತರ ಭೈರಪ್ಪನವರು ಮಾಡುವ ಎಲ್ಲಾ ಸ್ವಹಿತಾಸಕ್ತಿಯ ಕೆಲಸಗಳಿಗೂ ಅವರು ಮೌನ ಸಮ್ಮತಿ ನೀಡುವುದರಿಂದ ಭೈರಪ್ಪನವರಿಗೆ ಏನೂ ಸಮಸ್ಯೆಯಾಗಿಲ್ಲ. ಅದರಲ್ಲಿ ಒಬ್ಬರ “ಹರಿ”ಕಥೆಯನ್ನು ಈಗಾಗಲೇ ಹೇಳಿಯಾಗಿದೆ. ಮೊನ್ನೆ ತನಕ ಲ್ಯಾಂಬಿ ಸ್ಕೂಟರ್ ನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಈಗ 15 ಲಕ್ಷದ ಕಾರು, 70 ಲಕ್ಷದ ಮನೆ ಕಟ್ಟಿಸಿಕೊಂಡು ಸುಖವಾಗಿದ್ದಾರೆ. ಅವರು ತಮ್ಮ ಮನೆ ಮತ್ತು ಕಾರಿನ ಮೇಲೆ ವಿಶ್ವವಿದ್ಯಾನಿಲಯದ ಪ್ರಸಾದ, ಭೈರಪ್ಪನವರ ಕೃಪೆ ಎಂದು ಬರೆಸಿಕೊಂಡರೆ ಒಳ್ಳೆಯದು. ಈಗ ಅವರಿಗೆ ಎಂಎಲ್ ಸಿಯಾಗುವ ಆಸೆ ಹುಟ್ಟಿಕೊಂಡಿದೆ. ಇದ್ದ ಅಷ್ಟು ಸದಸ್ಯರಲ್ಲಿ ಸ್ವಲ್ಪ ಕಾನೂನು ನಿಯಮಾವಳಿ ಗೊತ್ತಿರುವುದು ಅವರಿಗೆ ಮಾತ್ರ. ಇದು ಅವರ ಮೂರನೇ ಅವಧಿ ಎನ್ನುವುದು ಮತ್ತು ಇಂತಹ ಅವಕಾಶ ವಿಶ್ವವಿದ್ಯಾನಿಲಯದ ಕಾನೂನು ನಿಯಮಾವಳಿಗಳಲ್ಲಿ ಇಲ್ಲದೆ ಇದ್ದರೂ ಅವರನ್ನು ನೇಮಕ ಮಾಡಿರುವುದು ವಿವಿಯ ಎಲ್ಲರ ಹುಬ್ಬೇರಿಸಿದೆ.
ಸುಂದರ ನೈಕ್ ಬೆಂಗಳೂರಿನಿಂದ ಬರಬೇಕು. ಅವರು ಹೇಳಿದ ಸಣ್ಣಪುಟ್ಟ ಕೆಲಸಗಳು ಆಗುತ್ತವೆ. ನ್ಯಾಯವಾದಿ ಪ್ರಸನ್ನ ಕುಮಾರ್ ರೈ, ಮೋಹನ ಚಂದ್ರ ನಂಬಿಯಾರ್ ಸ್ವಲ್ಪ ಧ್ವನಿ ಎತ್ತುತ್ತಾರೆ. ಕಡೆಗೆ ಉಳಿದವರೆಲ್ಲರೂ ಅದಕ್ಕೆ ಸಮಜಾಯಿಷಿಕೆ ನೀಡುತ್ತಾರೆ. ಮಡಿಕೇರಿಯ ಪುಷ್ಪಾ ಅವರು ಸಾತ್ವಿಕರು. ಮೀಟಿಂಗ್ ಗೆ ಬಂದು ಹೋಗುವುದೇ ಅವರಿಗೆ ಹರಸಾಹಸ. ಇಲ್ಲಿ ಆಟ ನಡೆಯುವುದೇ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೊ ಅವರ ಆತ್ಮೀಯ ಕ್ರೈಸ್ತ ಮುಖಂಡರೊಬ್ಬರದ್ದು. ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ಕಾಯುವುದೇ ಅವರ ಉದ್ದೇಶ. ಅದರೊಂದಿಗೆ ಕಳೆದ ಕೆಲವು ವರ್ಷಗಳ ಹಿಂದೆ ಮಂಗಳೂರು ವಿವಿಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಬಿಬಿಎಂ ಅಂಕಪಟ್ಟಿ ಅವ್ಯವಹಾರಿಯ ಕುತ್ತಿಗೆ ಕಾಯುವ ಗುರುತರ ಹೊಣೆ ಇದೆ. ಈ ವಿವರವನ್ನು ಮುಂದಿನ ಬಾರಿ ಪ್ರತ್ಯೇಕವಾಗಿ ನೀಡಲಾಗುವುದು!
Leave A Reply