ಅಂತೂ ಬುದ್ಧಿ ಕಲಿತ ಪಾಕಿಸ್ತಾನ, ಸಯೀದ್ ಸಂಘಟನೆಗೆ ದೇಣಿಗೆ ಪಡೆಯದಂತೆ ನಿಷೇಧ!
ಇಸ್ಲಾಮಾಬಾದ್: ಇದುವರೆಗೂ ಉಗ್ರ ಹಫೀಜ್ ಸಯೀದ್ ಬೆಂಬಲಕ್ಕೆ ನಿಂತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಎಂದರೆ ಉಗ್ರರ ಪರ ಎಂಬ ಮಾತು ಕೇಳಿಬರುವಂತೆ ಮಾಡಿಕೊಂಡಿದ್ದ ಪಾಕಿಸ್ತಾನ ಕೊನೆಗೂ ಬುದ್ಧಿ ಕಲಿತಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಜಮಾತ್ ಉದ್ ದವಾ ಉಗ್ರ ಸಂಘಟನೆ ಹಾಗೂ ಪಲಾಹ್ ಇ ಇನ್ಸಾನಿಯತ್ ಉಗ್ರ ಸಂಘಟನೆ ಸೇರಿ ಹಲವು ಉಗ್ರ ಸಂಘಟನೆಗಳು ದೇಣಿಗೆ ಪಡೆಯುವಂತಿಲ್ಲ ಎಂದು ಪಾಕಿಸ್ತಾನ ವಿತ್ತೀಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ವಿಶ್ವಸಂಸ್ಥೆ ನಿಷೇಧಿಸಿರುವ ಲಷ್ಕರೆ ತಯ್ಯಬಾ ಸೇರಿ ಯಾವುದೇ ನಿಷೇಧಿತ ಸಂಘಟನೆಗಳು ದೇಣಿಗೆ ಪಡೆಯುವಂತಿಲ್ಲ ಎಂದು ಪಾಕಿಸ್ತಾನದ ಭದ್ರತೆ ಹಾಗೂ ವಿನಿಮಯ ಆಯೋಗ ಆದೇಶಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಮಾತ್ ಉದ್ ದವಾ, ಲಷ್ಕರೆ ತಯ್ಯಬಾ, ಪಲಾಹ್ ಇ ಇನ್ಸಾನಿಯತ್, ಪಾಸ್ಬಾನ್ ಇ ಅಲ್ಹೆ ಹದಿತ್, ಪಾಸ್ಬಾನ್ ಇ ಕಾಶ್ಮೀರ್ ಸಂಘಟನೆಗಳು ದೇಣಿಗೆ ನಿಷೇಧಿತ ಸಂಘಟನೆಗಳಲ್ಲಿ ಪ್ರಮುಖವಾಗಿವೆ ಎಂದು ಡಾನ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಬಳಿಕ ಮತ್ತೆ ಗೃಹಬಂಧನದಲ್ಲಿಟ್ಟಿತ್ತು. ಈಗ ಉಗ್ರ ಸಂಘಟನೆಗಳು ದೇಣಿಗೆ ಪಡೆಯುವುದನ್ನು ನಿಷೇಧಿಸಿರುವುದು ಉತ್ತಮ ನಡೆಯಾದರೂ ಅದನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳುತ್ತದೆ ಹಾಗೂ ಎಷ್ಟರಮಟ್ಟಿಗೆ ಉಗ್ರರನ್ನು ಪೋಷಣೆ ಮಾಡದೆ ಶಿಕ್ಷಿಸುತ್ತದೆ ಎಂಬುದರ ಮೇಲೆ ಭಯೋತ್ಪಾದನೆ ಕುರಿತು ಪಾಕಿಸ್ತಾನದ ನಿಲುವನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
Leave A Reply