ಈ ವರ್ಷ ರಾಜ್ಯಸಭೆಯಲ್ಲೂ ಪ್ರಾಬಲ್ಯ ಸಾಧಿಸಲಿದೆ ಬಿಜೆಪಿ! ಹೇಗೆ ಗೊತ್ತಾ?
ದೆಹಲಿ: ವರ್ಷಾಂತ್ಯದಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತದತ್ತ ದಾಪುಗಾಲು ಇಟ್ಟಿರುವ ಬಿಜೆಪಿಗೆ 2018ರಲ್ಲಿ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಮುನ್ನಡೆ ಸಾಧಿಸುವ ಜತೆಗೆ ರಾಜ್ಯಸಭೆಯಲ್ಲೂ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವ ಸಾಧ್ಯತೆಗಳಿವೆ.
ಪ್ರಸಕ್ತ ವರ್ಷ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲ್ಮನೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು 67ಕ್ಕೆ ಏರಿಸಿಕೊಳ್ಳಲು ನಿರ್ಧರಿಸಿದ್ದು, ಹಾಗೇನಾದರೂ ಇಷ್ಟು ಸಂಖ್ಯೆಗೆ ಏರಿಸಿಕೊಂಡರೆ ರಾಜ್ಯಸಭೆಯಲ್ಲಿ ಎನ್ ಡಿಎ ಬಲ 98 ಆಗಲಿದೆ. ಆ ಮೂಲಕ ರಾಜ್ಯಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ.
ಹೌದು, ಪ್ರಸಕ್ತ ವರ್ಷದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ ಹಾಗೂ ಉತ್ತರಾಖಂಡ ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡಲಿದ್ದು, ಚುನಾವಣೆಯಲ್ಲಿ ಬಿಜೆಪಿಯ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ. ಈ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿರುವುದರಿಂದ ಸರಾಗವಾಗಿ ಬಿಜೆಪಿ ಸದಸ್ಯರು ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಹಾಗಾಗಿ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ.
ಅತ್ತ ದೇಶದ 19 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಕೇವಲ ನಾಲ್ಕು ರಾಜ್ಯಗಳ ವಿಧಾನಸಭೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಕಾಂಗ್ರೆಸ್ ಈ ವರ್ಷ ರಾಜ್ಯಸಭೆಯಲ್ಲೂ ಹಿನ್ನಡೆ ಅನುಭವಿಸಲಿದೆ. ರಾಜಕೀಯ ತಜ್ಞರ ಅಂದಾಜಿನ ಪ್ರಕಾರ 2018ರ ಜುಲೈ ವೇಳೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 57ರಿಂದ 48ಕ್ಕೆ ಇಳಿಯಲಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಸದಸ್ಯರ ಹೆಚ್ಚಳ ಹಾಗೂ ಕಾಂಗ್ರೆಸ್ ಸದಸ್ಯರ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಸದಸ್ಯರ ಸಂಖ್ಯೆ 72ರಿಂದ 63ಕ್ಕೆ ಇಳಿಯಲಿದೆ. ಒಟ್ಟಿನಲ್ಲಿ ಲೋಕಸಭೆ, ವಿಧಾನಸಭೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ 2018ರಲ್ಲಿ ರಾಜ್ಯಸಭೆಯಲ್ಲೂ ಮುನ್ನಡೆ ಸಾಧಿಸಲಿದೆ.
Leave A Reply