ಶಾಸಕ ಮೊಯ್ದೀನ್ ಬಾವ ಹೇಳುವ ಲಾಜಿಕ್ ಅವರ ಮನೆಯಂಗಳದಲ್ಲಿಯೇ ಠುಸ್!
ದೀಪಕ್ ರಾವ್ ನ ಕೊಲೆ ಮಾಡುವುದರಲ್ಲಿ ಭಾರತೀಯ ಜನತಾ ಪಾರ್ಟಿಯವರ ಕೈವಾಡ ಇದೆ ಎನ್ನುವ ಅರ್ಥದ ಮಾತುಗಳನ್ನು ನಿನ್ನೆ ಸಿಕ್ಕಿ ಸಿಕ್ಕಿದ ಚಾನಲ್ ಗಳಲ್ಲಿ ಕುಳಿತು ಮೋಯ್ದೀನ್ ಬಾವ ಹೇಳ್ತಾ ಇದ್ರು. ದೀಪಕ್ ರಾವ್ ಹತ್ಯೆಗೊಳಗಾದ ಕ್ಷೇತ್ರದ ವ್ಯಾಪ್ತಿಯ ಶಾಸಕ ಮೊಯ್ದೀನ್ ಬಾವ ಎಲ್ಲಾ ಕಡೆ ಅದನ್ನೇ ಹೇಳಿದ್ದೇ ಹೇಳಿದ್ದು. ತನ್ನ ಹೆಸರನ್ನು ಕೆಡಿಸಲು ಬಿಜೆಪಿಯವರು ಹೀಗೆ ಮಾಡಿದ್ರು ಎಂದು ಬಾವ ಹೊಸ ವರಸೆ ನಿನ್ನೆ ಶುರು ಮಾಡಿದ್ದಾರೆ. ದೀಪಕ್ ರಾವ್ ಹಂತಕರ ಸಂಬಂಧಿಗಳು ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದಲ್ಲಿ ಹಿಂದೆ ಕೆಲಸ ಮಾಡಿದ್ದಾರೆ, ಆದ್ದರಿಂದ ಈ ಹತ್ಯೆಯನ್ನು ಬಿಜೆಪಿಯವರೇ ಮಾಡಿದ್ದು ಎಂದು ಶಾಸಕರು ಹೇಳುತ್ತಿದ್ದಾರೆ. ಕೊಲೆ ಆರೋಪಿಗಳಲ್ಲಿ ಒಬ್ಬನಾಗಿರುವ ಪಿಂಕಿ ನವಾಝ್ ನ ಅಕ್ಕನ ಗಂಡ ಮೊಹಮ್ಮದ್ ಆಲಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದಾರೆ ಮತ್ತು ಸಹೋದರ ಇಸ್ಮಾಯಿಲ್ ಬಿಜೆಪಿಯ ಯಾವುದೋ ಕಾರ್ಪೋರೇಟರ್ ಜೊತೆಯಲ್ಲಿ ವ್ಯಾಪಾರದಲ್ಲಿ ಪಾಲುದಾರನಾಗಿದ್ದಾನೆ ಎಂದು ಶಾಸಕ ಬಾವ ಮಾಧ್ಯಮಗಳಲ್ಲಿ ಹೇಳಿಕೊಂಡು ಬರುತ್ತಿದ್ದಾರೆ. ಒಂದು ವಿಷಯ ಶಾಸಕರಿಗೆ ನೆನಪಿಸಲು ಇಷ್ಟಪಡುತ್ತೇನೆ, ಬಹುಶ: ಅವರು ಮರೆತಿರಬಹುದು. ಆದರೆ ವಿಧಾನಸೌಧದ ಕಂಬಗಳು ಮರೆತಿಲ್ಲ.
ಇದೇ ಮೊಯ್ದೀನ್ ಬಾವ ಅವರ ಸಹೋದರ ಬಿ ಎಂ ಫಾರೂಕ್ ಜಾತ್ಯಾತೀತ ಜನತಾದಳದ ರಾಜ್ಯ ಮುಖಂಡರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎಡ ಬಲದಲ್ಲಿಯೇ ಇರುವ ಫಾರೂಕ್ ಅವರು ಜೆಡಿಎಸ್ ನ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಅವರು ಜೆಡಿಎಸ್ ನಿಂದ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದಾಗ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಸಂಚಲನವಾಗಿತ್ತು. ಅವರು ಸ್ಪರ್ಧಿಸಿದರೆ ಕಾಂಗ್ರೆಸ್ಸಿನ ಮೂರನೇ ಅಭ್ಯರ್ಥಿಗೆ ಮತ ಕಡಿಮೆ ಆಗುತ್ತದೆ, ಕಾಂಗ್ರೆಸ್ ಸೋಲಬಹುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಂಡಮಂಡಲರಾಗಿದ್ದರು. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಅದರ ಪರಿಣಾಮ ಚೆನ್ನಾಗಿರಲ್ಲ, ನಿಮ್ಮ ಸಹೋದರನಿಗೆ ಬುದ್ಧಿ ಹೇಳಿ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಎಲ್ಲರ ಎದುರು ಮೊಯ್ದೀನ್ ಬಾವ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಆಗ ಮುಖದ ಮೇಲೆ ಮೂಡಿದ್ದ ಬೆವರನ್ನು ಒರೆಸಿಕೊಳ್ಳುತ್ತಾ ಮೊಯ್ದೀನ್ ಬಾವ “ಸರ್, ನನ್ನ ತಮ್ಮ ನನ್ನ ಮಾತು ಕೇಳುವುದಿಲ್ಲ” ಎಂದು ಉಗುಳು ನುಂಗಿ ಹೇಳಿದ್ದರು. ಮತ್ತೇನ್ರಿ, ನಿಮಗೆ ಅಷ್ಟೂ ಭಾಷೆ ಇಲ್ವಾ, ನಮ್ಮ ಅಭ್ಯರ್ಥಿಯ ಎದುರೇ ನಮ್ಮ ಪಕ್ಷದ ಶಾಸಕರಾಗಿದ್ದುಕೊಂಡು ಸಹೋದರನನ್ನು ಇನ್ನೊಂದು ಪಕ್ಷದಿಂದ ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುತ್ತೀರಾ, ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಏನು ಮಾಡುತ್ತೇನೆ, ನೋಡಿ” ಎಂದು ಸಿದ್ಧರಾಮಯ್ಯ ಬೈದ ರಭಸಕ್ಕೆ ಮೊಯ್ದೀನ್ ಬಾವ ಅವರಿಗೆ ಆವತ್ತು ನಿದ್ರೆ ಬಂದಿರಲಿಲ್ಲ.
ಅಷ್ಟೇ ಅಲ್ಲ, ಅದೇ ಕಾರಣ ಮುಂದಿಟ್ಟು ತಮಗೆ ಟೆನ್ಷನ್ ಕೊಟ್ಟ ಮೊಯ್ದೀನ್ ಬಾವ ಅವರಿಗೆ ಟಿಕೇಟ್ ಕೊಡಲು ಈ ಬಾರಿ ಸಿದ್ದು ಹಿಂದೇಟು ಹಾಕಲಿದ್ದಾರೆ ಎನ್ನುತ್ತಿದೆ ಕಾಂಗ್ರೆಸ್ ಆಂತರಿಕ ವಲಯ. ಆದ್ದರಿಂದ ಈ ಬಾರಿ ಮತ್ತೆ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಪೇಮೆಂಟ್ ಮಾಡಿ ಟಿಕೇಟ್ ತೆಗೆದುಕೊಂಡು ಬಂದರೆ ಮೊಯ್ದೀನ್ ಬಾವ ಬಚಾವ್. ಇಲ್ಲದಿದ್ದರೆ ಅದು ಬೇರೆಯವರ ಪಾಲು ಆದರೂ ಆಗಬಹುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಆ ರೀತಿ ಜೋರು ಮಾಡಿದರೂ ಒಂದು ಎಮ್ಮೆಲ್ಸಿ ಚುನಾವಣೆಗೆ ನಿಲ್ಲಬೇಡ ಎಂದು ತನ್ನ ಸಹೋದರನಿಗೆ ಹೇಳಲಾಗದ ಬಾವ ಅವರು ಪಿಂಕಿ ನವಾಝ್ ಆರೋಪಿ ಎಂದು ಗೊತ್ತಾದ ಕೂಡಲೇ ಪಿಂಕಿ ನವಾಝ್ ನ ಸಹೋದರ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಬಡಬಡಾಯಿಸಿದ್ದಾರೆ. ಹಾಗಾದರೆ ತಮ್ಮ ಸಹೋದರ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿ ಸಿಎಂ ನಿದ್ರೆಗೆಡಿಸಿದರೆ “ಸಹೋದರ ಮಾತು ಕೇಳಲ್ಲ” ಎನ್ನುವ ಸಬೂಬು, ಅದೇ ಆರೋಪಿಯ ಸಹೋದರ ಬೇರೆ ಪಕ್ಷದಲ್ಲಿ ಇದ್ದರೆ ಅವರೇ ಮಾಡಿಸಿದ್ದು ಎನ್ನುವ ಲಾಜಿಕ್.
ಏನು ಮೊಯ್ದೀನ್ ಬಾವ ಅವರೇ, ನಿಮಗೆ ಒಂದು ರೂಲ್ಸ್, ಕೊಲೆ ಆರೋಪಿಗಳಿಗೆ ಒಂದು ರೂಲ್ಸಾ? ಒಂದು ವೇಳೆ ನಿಮ್ಮ ಸಹೋದರ ಜೆಡಿಎಸ್ ನಿಂದ ಗೆದ್ದು ಎಮ್ಮೆಲ್ಸಿ ಆಗಿದ್ದಿದ್ದರೆ ನೀವು ಇಷ್ಟು ದಿನ ಎಂಎಲ್ ಎ ಆಗಿ ಉಳಿಯಲು ಸಿದ್ಧರಾಮಯ್ಯ ಬಿಡುತ್ತಿದ್ದಾರಾ? ನಿಮ್ಮನ್ನು ಉಟ್ಟ ಬಟ್ಟೆಯಲ್ಲಿಯೇ ವಿಧಾನಸೌಧದಿಂದ ಓಡಿಸುತ್ತೀರಲಿಲ್ಲವಾ. ಹಾಗಿದ್ದ ಮೇಲೆ ಪಿಂಕಿ ನವಾಝ್ ಸಹೋದರ ಬಿಜೆಪಿಯಲ್ಲಿ ಇದ್ದಾರೆ, ಆದ್ದರಿಂದ ಬಿಜೆಪಿಯವರು ಮಾಡಿಸಿದ್ದಾರೆ ಎಂದು ಹೇಳುತ್ತಿರಲ್ಲ ಬಾವ ಅವರೇ. ನಾಡಿದ್ದು ನಿಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಎದುರು ನಿಲ್ಲುವ ಜೆಡಿಎಸ್ ಅಭ್ಯರ್ಥಿಗೆ ಫಾರೂಕ್ ಅವರು ಆರ್ಥಿಕ ಶಕ್ತಿ ಪೂರೈಸಿ ಸಿದ್ದು ಗೆಲ್ಲುವುದು ಕಷ್ಟವಾದರೆ ನಿಮ್ಮನ್ನು ನಿದ್ರೆ ಮಾಡಲಿಕ್ಕೆ ಸಿದ್ಧರಾಮಯ್ಯ ಬಿಡುತ್ತಾರೆ ಎಂದು ಅಂದುಕೊಂಡಿದ್ದಿರೇನು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಸಹೋದರರಲ್ಲಿಯೇ ಒಬ್ಬರು ಕಾಂಗ್ರೆಸ್, ಜೆಡಿಎಸ್ ಇರುವಾಗ ಸುರತ್ಕಲ್ ಅಥವಾ ಉಳ್ಳಾಲದ ಪಿಂಕಿ ನವಾಝ್ ನ ಸಹೋದರ ಅಥವಾ ಬಾವ ಬೇರೆ ಪಕ್ಷದಲ್ಲಿ ಇದ್ದರೆ ಅದೇಗೆ ಇಬ್ಬರೂ ಒಂದೆಯಾಗುತ್ತಾರೆ. ಒಂದು ವೇಳೆ ಭವಿಷ್ಯದಲ್ಲಿ ಕೊಲೆ ಆರೋಪಿಗಳು ಮೋಯ್ದೀನ್ ಬಾವ ಅವರ ಪರಿಚಯದವರು ಎಂದು ಸಾಬೀತಾಯಿತು ಎಂದೇ ಇಟ್ಟುಕೊಳ್ಳೋಣ, ಆಗ ಇದರಲ್ಲಿ ಜೆಡಿಎಸ್ ಅನ್ನು ಎಳೆದು ತಂದು ಮೊಯ್ದೀನ್ ಬಾವ ಸಹೋದರ ಫಾರೂಕ್ ಜೆಡಿಎಸ್ ನಲ್ಲಿ ಇರುವುದರಿಂದ ಜೆಡಿಎಸ್ ಕೂಡ ಹತ್ಯೆಗೆ ಸಂಚು ಹೂಡಿತ್ತು ಎಂದು ಯಾರಾದರೂ ಹೇಳಿದರೆ ದೇವೇಗೌಡರು, ಕುಮಾರಸ್ವಾಮಿ ಸುಮ್ಮನೆ ಬಿಡುತ್ತಾರಾ? ಆದ್ದರಿಂದ ಇಂತಹ ಅರ್ಥವಿಲ್ಲದ ಲಾಜಿಕ್ ತಂದರೆ ನಿಮ್ಮ ಮೇಲೆ ಕಳೆದ ಬಾರಿ ಜನ ಇಟ್ಟ ವಿಶ್ವಾಸವನ್ನು ನೀವೆ ಕಳೆದುಕೊಳ್ಳುತ್ತೀರಿ ಮೊಯ್ದೀನ್ ಬಾವ ಅವರೇ.
ನೀವು ಇವತ್ತು ದೀಪಕ್ ರಾವ್ ಅವರ ಮನೆಗೆ ಹೋಗಿದ್ದಿರಿ. ಐದು ಲಕ್ಷದ ಚೆಕ್ ಕೊಡಲು ತಯಾರು ಮಾಡಿದ್ರಿ. ಆದರೆ ಆ ತಾಯಿ ಅದನ್ನು ತೆಗೆದುಕೊಂಡಿಲ್ಲ. ದೀಪಕ್ ರಾವ್ ಅವರ ಮೂಗ, ಕಿವುಡ ಸಹೋದರನನ್ನು ನೀವು ಅಪ್ಪಿಕೊಳ್ಳಲು ಹೋದ್ರಿ, ಅವನು ನಿಮ್ಮ ಹತ್ತಿರಕ್ಕೂ ಬರಲು ಕೇಳಿಲ್ಲ. ನಿನ್ನೆ ಯಾಕೆ ಬರಲಿಲ್ಲ ಎಂದು ಮನೆಯವರು ಕೇಳಿದಾಗ ಅದೇನೋ ಉತ್ತರ ಕೊಟ್ರಿ. ನಿನ್ನೆ ನೀವು ಬಂದಿದ್ರೆ ಏನು ಆಗುತ್ತಿತ್ತು? ನಿಮ್ಮ ಜೊತೆ ಪೊಲೀಸರು ಇರ್ತಾರೆ, ಯಾರು ಏನು ಮಾಡೋಕೆ ಆಗುತ್ತೆ. ಒಂದು ವೇಳೆ ಯಾರಾದರೂ ಏನಾದರೂ ಮಾಡಿದ್ರು ನಿಮಗೆ ಏನಾದರೂ ಆಗುತ್ತಿತ್ತಾ? ಅಂದರೆ ನಿಮಗೆ ಜೀವದ ಅಷ್ಟು ಹೆದರಿಕೆ ಇದೆ. ಹಾಗಾದರೆ ದೀಪಕ್ ರಾವ್ ಗೆ ನಾಲ್ಕು ಜನ ತಲವಾರು ದಾಳಿ ಮಾಡಿದಾಗ ಆ ಜೀವಕ್ಕೆ ಎಷ್ಟು ನೋವಾಗಬೇಡಾ. ಅಂದರೆ ನೀವು ಜನಪ್ರತಿನಿಧಿಗಳು ಮಾತ್ರ ಮನುಷ್ಯರು, ಉಳಿದವರು ಏನು?
Leave A Reply