ನರೇಂದ್ರ ಮೋದಿಗೆ ರುಚಿ ರುಚಿ ಅಡುಗೆ ಬಡಿಸಿದ ನೆಚ್ಚಿನ ಬಾಣಸಿಗ ಸಾವು
ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿ ವೇಳೆ ಆಹಾರ ಸಿದ್ಧಪಡಿಸುತ್ತಿದ್ದ, ನೆಚ್ಚಿನ ಬಾಣಸಿಗ ಮೆದುಳಿನ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭೆ ಕ್ಷೇತ್ರವಾದ ವಾರಣಾಸಿ ಭೇಟಿ ವೇಳೆ, ಮೋದಿ ಅವರಿಗೆ ಅಚ್ಚುಮೆಚ್ಚಾದ ಅಡುಗೆ ಸಿದ್ಧಪಡಿಸುತ್ತಿದ್ದ ಬಾಣಸಿಗ ಪ್ರದೀಪ್ ಕುಮಾರ ಮಲ್ಹೋತ್ರಾ ಮೃತಪಟ್ಟಿದ್ದಾರೆ.
ಪ್ರದೀಪ್ ಕುಮಾರ ಅವರ ಅಡುಗೆ ರುಚಿಗೆ ಮೋದಿ ಮನಸೋತ್ತಿದ್ದು, ಅವರನ್ನು ಹಲವು ಬಾರಿ ಹೊಗಳಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ವಾರಣಾಸಿಗೆ ಭೇಟಿ ನೀಡಿದ್ದಾಗ ಡಿಸೆಲ್ ಲೊಕೋಮೊಟಿವ್ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುತ್ತಿದ್ದು, ಅಲ್ಲಿ ಅವರಿಗೆ ಪ್ರದೀಪ್ ಕುಮಾರ ಅಡುಗೆ ಸಿದ್ಧಪಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮೋದಿ ಅವರಿಗೆ ಇಷ್ಟವಾದ ಶುಂಠಿ ಟೀ ಯಿಂದ ಹಿಡಿದ ಗುಜರಾತಿ ಆಹಾರಗಳು ಮತ್ತು ಸೂಪ್ ಗಳನ್ನು, ಸಲಾಡ್ಸ್, ಕಾಶಿಯ ವಿಶೇಷ ಆಹಾರಗಳಾದ ಬಡಾಯಿ, ಸಬ್ಜಿ ಮತ್ತು ಬನಾರಸಿ ರಸ್ ಮಲಾಯಿಗಳನ್ನು ಸಿದ್ಧಪಡಿಸುತ್ತಿದ್ದರು.
ಪ್ರದೀಪ್ ಕುಮಾರ ರಾಜಸ್ಥಾನ ಮೂಲದವರಾಗಿದ್ದು, 1963 ರಲ್ಲಿ ಅವರ ತಂದೆಗೆ ವರ್ಗಾವಣೆಯಾಗಿದ್ದರಿಂದ ವಾರಣಾಸಿಯಲ್ಲೇ ವಾಸಿಸುತ್ತಿದ್ದರು. 1966ರಲ್ಲಿ ಕ್ಯಾಂಟೀನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಅವರು ಅತಿಥಿ ಗೃಹಗಳಲ್ಲಿ ವಾಸಿಸುವ ವಿವಿಐಪಿಗಳಿಗೆ ಆಹಾರ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಅವರ ಸೇವಾ ಅವಧಿ 2005ರಲ್ಲಿ ಮುಕ್ತಾಯವಾಗಿದ್ದರು, ಅವರು ತಮ್ಮ ಕಾರ್ಯವನ್ನು ಮುಂದುವರಿಸಿದ್ದರು.
Leave A Reply