ಈ ಊರಿನ ಹೆಸರನ್ನು ಹಾಳು ಮಾಡಲು ಮತಾಂಧರಿಗೆ ನಾಲ್ಕೈದು ತಲವಾರು ಸಾಕು!
ದೀಪಕ್ ರಾವ್ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕರಾದ ಮಜೀದ್ ಅವರು ತಮ್ಮ ಅಂಗಡಿಯ ಕೆಲಸದವನಾದ ದೀಪಕ್ ರಾವ್ ಸತ್ತಿರುವುದಕ್ಕೆ ಕಣ್ಣೀರು ಹಾಕುತ್ತಾರೆ ಎಂದರೆ ನೀವು ಮಾನವೀಯತೆ ಎನ್ನುವ ಶಬ್ದ ಜಾತಿ, ಧರ್ಮಕ್ಕಿಂತ ದೊಡ್ಡದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಇನ್ನು ನಿನ್ನೆ ಟಿವಿಯಲ್ಲಿ ನೋಡುತ್ತಿದ್ದೆ, ಮಜೀದ್ ಮನೆಯ ಹೆಂಗಸೊಬ್ಬರ ಹೆಗಲಿಗೆ ಒರಗಿ ದೀಪಕ್ ತಾಯಿ ಕಣ್ಣೀರು ಹಾಕುತ್ತಿದ್ದರು. ಆ ಬುರ್ಖಾ ತೊಟ್ಟ ಹೆಂಗಸಿನ ಕಣ್ಣಲ್ಲಿ ನೀರು ಇಳಿಯುತ್ತಿತ್ತು. ಇಬ್ಬರೂ ತಾಯಂದಿರು ತಮ್ಮ ವೇದನೆಯನ್ನು ಪರಸ್ಪರ ಹೊರ ಹಾಕುತ್ತಿದ್ದರೆ ಅದನ್ನು ನೋಡುವ ಎಂತಹ ಮತಾಂಧನ ಕಲ್ಲು ಹೃದಯದಲ್ಲಿಯೂ ಡೈನಮೇಟ್ ಸ್ಫೋಟಿಸಿದ ಸದ್ದು ಆಗಬಹುದು. ಮಜೀದ್ ಮನೆಯವರು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ದೀಪಕ್ ತಾಯಿಯನ್ನು ಸಂತೈಸುತ್ತಿದ್ದರೆ ಈ ಧರ್ಮ, ಈ ಬಂಟಿಂಗ್ ಗಳು, ಈ ಧ್ವಜ, ಈ ಬ್ಯಾನರ್ ಗಳಿಗಿಂತ ಮನುಷ್ಯತ್ವ ಎನ್ನುವ ಶಬ್ದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಈ ಸಮಾಜದಲ್ಲಿ ಇನ್ನೂ ಉಳಿದಿದೆ ಎನ್ನುವುದು ಗ್ಯಾರಂಟಿ. ಆದರೆ ಧರ್ಮದ ನಶೆ ಏರಿಸಿಕೊಂಡ ಪಿಂಕಿ, ಚಿಂಕಿ, ಮಂಕಿಗಳಿಗೆ ಐಎಸ್ ಐ, ಇಂಡಿಯನ್ ಮುಜಾಯುದ್ದೀನ್ ಗಳ ಮೂಲಕ ಪಿಎಫ್ ಐನಂತಹ ಸಂಘಟನೆಗಳು ಬಡಿಸುವ ಎಂಜಿಲೆ ವಿಟಾಮಿನ್ ಮತ್ತು ಪ್ರೋಟಿನ್.
ಅಷ್ಟಕ್ಕೂ ದೀಪಕ್ ರಾವ್ ನ ಹಿಂದೆ ಆ ಮತಾಂಧರು ಯಾಕೆ ಬಿದ್ದಿದ್ದರು ಎಂದರೆ ಆರೋಪಿಗಳಲ್ಲಿ ಇಬ್ಬರು ಆವತ್ತು ಈದ್ ಮಿಲಾದ್ ದಿನ ತಮ್ಮ ಧರ್ಮದ ಧ್ವಜ ಕಟ್ಟುವಾಗ ನಡೆದ ಗಲಾಟೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದು, ಅದನ್ನು ದೀಪಕ್ ರಾವ್ ಮೊಬೈಲ್ ವಿಡಿಯೋದಲ್ಲಿ ಚಿತ್ರೀಕರಣವಾಗಿದ್ದು, ಅದನ್ನು ಆತ ಪೊಲೀಸರಿಗೆ ಕೊಟ್ಟಿದ್ದರೆ ರಿಜ್ವಾನ್, ಪಿಂಕಿಯ ಮೇಲೆ ದೇಶದ್ರೋಹದ ಕೇಸ್ ಬಿದ್ದು ಅವರು ಒಳಗೆ ಬೀಳುವ ಚಾನ್ಸ್ ಕೂಡ ಇತ್ತು. ಆದ್ದರಿಂದ ಅದನ್ನು ನಿನ್ನ ಮೊಬೈಲಿನಿಂದ ಡಿಲೀಟ್ ಮಾಡು ಎಂದು ದೀಪಕ್ ಮೇಲೆ ಒತ್ತಡ ಹಾಕುತ್ತಿದ್ದರು. ಅವನು ಡಿಲೀಟ್ ಮಾಡಲಿಲ್ಲ. ಅದಕ್ಕೆ ಅವರು ಏನು ಮಾಡಿದ್ರು ಎಂದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಅಂದರೆ ಇವರಿಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಲು ಧೈರ್ಯವಿದೆ. ಅದನ್ನು ಯಾರಾದರೂ ಚಿತ್ರೀಕರಿಸಿಬಿಟ್ಟರೆ ಎನ್ನುವ ಆತಂಕ ಇದೆ. ಅಷ್ಟು ಪಾಕಿಸ್ತಾನವನ್ನು ಪ್ರೀತಿಸುವವರು ಭಾರತದಲ್ಲಿ ಯಾಕೆ ಇರಬೇಕು ಎನ್ನುವುದು ಪ್ರಶ್ನೆ. ಈ ದೇಶದ ಮೇಲೆ ನಾಳೆ ಯಾವುದಾದರೂ ಶತ್ರುರಾಷ್ಟ್ರ ದಾಳಿ ಮಾಡಿದರೆ ಇದೇ ಪಾಕಿಸ್ತಾನಕ್ಕೆ ಹುಟ್ಟಿದವರು ನಮ್ಮ ದೇಶದ ಪರವಾಗಿ ನಿಲ್ಲುತ್ತಾರೆ ಎನ್ನುವುದಕ್ಕೆ ಯಾವ ಗ್ಯಾರಂಟಿ ಕೂಡ ಇಲ್ಲ. ಹಾಗಂತ ಇಂತವರ ಸಂಖ್ಯೆ ದೊಡ್ಡಮಟ್ಟದಲ್ಲಿ ಇರಲಿಕ್ಕಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಒಂದು ವೇಳೆ ಇದ್ದರೆ ಅದರಷ್ಟು ಆತಂಕಕಾರಿ ವಿಷಯ ಬೇರೆ ಇಲ್ಲ. ಹಾಗಂತ ಅಂತವರನ್ನು ಪೊಲೀಸರು ಹಿಡಿದು “ಏನೋ ಭಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳ್ತೀಯಾ” ಎಂದು ನಾಲ್ಕು ಬಾರಿಸಿದರೆ ಮುಂದಿನ ಬಾರಿ ಅವನು ಹೇಳಬೇಕು ಎಂದು ಅಂದುಕೊಂಡರೂ ಘೋಷಣೆ ಅವನ ಗಂಟಲಲ್ಲಿ ಉಳಿದುಬಿಡುತ್ತದೆ, ಯಾಕೆಂದರೆ ಪೆಟ್ಟು ತಿಂದ ನೋವು ನೆನಪಾಗುತ್ತದೆ. ಆದರೆ ಪೊಲೀಸರು ಇಂತಹ ಪಿಂಕಿ, ನವಾಝ್ ಗಳನ್ನು ಹಿಡಿದು ಕೈಯಲ್ಲಿ ಬೆತ್ತ ರೆಡಿ ಮಾಡುವಾಗಲೇ ಇವರ ಅಪ್ಪನ ಸಮಾನರಾದವರು ಫೋನ್ ಮಾಡಿ “ಪಾಪ, ಹುಡುಗ ಗೊತ್ತಿಲ್ಲದೆ ಹೇಳಿಬಿಟ್ಟ ಎಂದು ಅನಿಸುತ್ತದೆ, ಅವನನ್ನು ಕಳುಹಿಸಿಬಿಡಿ, ಅವನ ಮನೆಯವರು ನನ್ನಲ್ಲಿಗೆ ಬಂದು ತುಂಬಾ ರಿಕ್ವೆಸ್ಟ್ ಮಾಡುತ್ತಿದ್ದಾರೆ” ಎಂದು ಹೇಳಿ ಕೇಸ್ ಕ್ಲೋಸ್ ಮಾಡಿಬಿಡುತ್ತಾರೆ.
ಕೆಟ್ಟ ರಾಜಕಾರಣಿಗಳ ನಡುವೆಯೂ ಕೆಳಹಂತದಲ್ಲಿ ಮಾನವೀಯ ಮೌಲ್ಯವನ್ನು ಒಂದಿಷ್ಟು ಜನ ಉಳಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ದೀಪಕ್ ರಾವ್ ನನ್ನು ನಾಯಿಗಳು ಎಟ್ಯಾಕ್ ಮಾಡುತ್ತಿರುವಾಗ ಆ ನಾಯಿಗಳಿಗೆ ಕಲ್ಲು ಬಿಸಾಡಿ ಓಡಿಸುವ ಪ್ರಯತ್ನವನ್ನು ಅಲ್ಲಿಯೇ ಇದ್ದ ಕೆಲವು ಮುಸ್ಲಿಂ ಮಹಿಳೆಯರು ಮಾಡಿದ್ದಾರೆ. ಆದರೆ ಕೈಯಲ್ಲಿ ತಲವಾರು ಹಿಡಿದಿದ್ದವರಿಗೆ ಆ ಕಲ್ಲುಗಳು ಯಾವ ಲೆಕ್ಕ? ಅಷ್ಟೇ ಅಲ್ಲ, ಕೊಟ್ಟಾರ ಚೌಕಿಯಲ್ಲಿ ಬಶೀರ್ ಎನ್ನುವ ಯುವಕನ ಮೇಲೆ ಮೊನ್ನೆ ದುಷ್ಕರ್ಮಿಗಳು ದಾಳಿ ಮಾಡಿದಾಗ ರಕ್ತದ ಮಡುವಿನಲ್ಲಿ ಬಿದ್ದ ಬಶೀರ್ ನನ್ನು ಎತ್ತಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದವರು ಹಿಂದೂಗಳು. ಅಂದರೆ ಕೆಳಮಟ್ಟದಲ್ಲಿ ಇನ್ನೂ ಮಾನವೀಯ ಸಂಬಂಧಗಳು ಉಳಿದಿವೆ. ವಿಷ ಕಾರುವವರಿಗೆ ಇದೆಲ್ಲ ಗೊತ್ತಿಲ್ಲ. ತಲವಾರು ಬೀಸಿದಾಗ ಕೆಳಗೆ ಚೆಲ್ಲುವ ರಕ್ತದ ಮೇಲೆ ನಾನು ಹಿಂದೂವಿನ ರಕ್ತ ಅಥವಾ ಮುಸಲ್ಮಾನನ ರಕ್ತ ಎನ್ನುವ ಲೇಬಲ್ ಇರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಹೀಗೆ ಇರಲೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ಇಷ್ಟು ಶಿಕ್ಷಣ ಸಂಸ್ಥೆಗಳು, ಪ್ರಖ್ಯಾತ ಆಸ್ಪತ್ರೆಗಳು, ಬ್ಯಾಂಕುಗಳು, ದೊಡ್ಡ ದೊಡ್ಡ ಹೋಟೇಲುಗಳು, ಬಂದರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲ ಇವೆ ಎಂದರೆ ಇಲ್ಲಿನ ಜನ ಪ್ರಬುದ್ಧರು, ಬುದ್ಧಿವಂತರು, ಜ್ಞಾನಿಗಳು ಎನ್ನುವ ಕಾರಣಕ್ಕೆ. ನಮ್ಮ ದೇಶದ ಯಾವುದೋ ಮೂಲೆಯಿಂದ ಯಾವುದೋ ಕುಟುಂಬ ತನ್ನ ಮಗಳನ್ನೋ, ಮಗನನ್ನೋ ಇಲ್ಲಿ ಓದಲು ಕಲಿಸುತ್ತಾರೆ ಎಂದರೆ ಅದಕ್ಕೆ ಕಾರಣ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ. ಧರ್ಮ ನಮ್ಮ ಮನೆಗಳ ದೇವರ ಕೋಣೆಯಲ್ಲಿ ಮಾತ್ರ ಇದ್ದರೆ ಆ ಊರಿಗೂ ಸೇಫ್, ಊರಿನ ಯುವಕರಿಗೂ ಸೇಫ್. ಹೊರಗೆ ಬಂದರೆ ಎಲ್ಲರಿಗೂ ಹಾಳು. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವಲ್ಲಿ ಅನೇಕ ಮಹನೀಯರ ಕೊಡುಗೆ ಇದೆ. ಹಾಗೆ ಈ ಊರಿನ ಹೆಸರನ್ನು ಹಾಳು ಮಾಡಲು ಮತಾಂಧರಿಗೆ ನಾಲ್ಕೈದು ತಲವಾರು ಸಾಕು. ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ಅದೇ ತಲವಾರುಗಳನ್ನು ಗಂಟು ಕಟ್ಟಿಸಿ ಅಟ್ಟದ ಮೇಲೆ ಹಾಕುವಂತೆ ಮಾಡಬಹುದು. ಆದರೆ ತಲವಾರು ಹಿಡಿವ ಅದೇ ಯುವಕರು ಊರಿನ ಜನಪ್ರತಿನಿಧಿಗಳೊಂದಿಗೆ ನಿಂತು, ಕುಳಿತು ಫೋಟೊ ತೆಗೆದು ಅದನ್ನೇ ಮಾನದಂಡ ಮಾಡಿ ಪೊಲೀಸರಿಗೆ ತೋರಿಸಿ ಅದೇ ಜನಪ್ರತಿನಿಧಿಗಳತ್ರ ಫೋನ್ ಮಾಡಿಸಿದರೆ ನಮ್ಮ ಜಿಲ್ಲೆ ಇಲ್ಲಿಯೇ ಬಾಕಿಯಾಗುತ್ತದೆ, ಆತಂಕದ ನಡುವೆ!
Leave A Reply