ಕೊನೆಗೂ ಮಣಿದ ಪಾಕಿಸ್ತಾನ, 72 ಉಗ್ರ ಸಂಘಟನೆ ನಿಷೇಧ
ಇಸ್ಲಾಮಾಬಾದ್: ಉಗ್ರ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಹಫೀಜ್ ಸಯೀದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಅಮೆರಿಕ ಒತ್ತಾಯಿಸಿದ್ದಕ್ಕೆ ಪಾಕಿಸ್ತಾನ ಕೊನೆಗೂ ಮಣಿದಿದ್ದು, ಪಾಕಿಸ್ತಾನದ ಸುಮಾರು 72ಕ್ಕೂ ಅಧಿಕ ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ.
26/11ರ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಸೇರಿ ಹಲವು ಉಗ್ರ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಹಕ್ಕಾನಿ ನೆಟ್ ವರ್ಕ್ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದ ಕುರಿತು ಅಮೆರಿಕ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ನಿರ್ಧಾರ ಪ್ರಕಟಿಸಿದೆ.
ಅಷ್ಟೇ ಅಲ್ಲ, ಅಮೆರಿಕದ ನೀಡಿದ ಹಲವು ಎಚ್ಚರಿಕೆ ಪಾಲಿಸದ ಪಾಕಿಸ್ತಾನಕ್ಕೆ ತಾವು ನೀಡುತ್ತಿದ್ದ ಸುಮಾರು 200 ಕೋಟಿ ಡಾಲರ್ ಆರ್ಥಿಕ ನೆರವನ್ನು ಸಹ ಸ್ಥಗಿತಗೊಳಿಸಿತ್ತು. ಇದರಿಂದ ಬೆಚ್ಚಿಬಿದ್ದ ಪಾಕಿಸ್ತಾನ ಸಂಘಟನೆ ನಿಷೇಧಿಸಿದೆ.
ಆದಾಗ್ಯೂ ಭಾರತ ಸಹ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಪಾಕಿಸ್ತಾನ ಉಗ್ರರ ತವರೂರು ಎಂಬಂತೆ ಬಿಂಬಿಸುತ್ತಲೇ ಇದೆ. ಈಗ ಕೊನೆಗೂ ಅಮೆರಿಕ ಒತ್ತಾಯಕ್ಕೆ ಮಣಿದ ಪಾಕಿಸ್ತಾನ ಬುದ್ಧಿ ಕಲಿಯಿತಲ್ಲ ಎಂಬುದೇ ಸಕಾರಾತ್ಮಕ ಮನೋಭಾವನೆ ಮೂಡಲು ಕಾರಣವಾಗಿದೆ. ಆದರೂ ಅದನ್ನು ಎಷ್ಟರಮಟ್ಟಿಗೆ ನಿಷ್ಠೆಯಿಂದ ಕಾಯ್ದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
Leave A Reply