ಹಿಂದುತ್ವವೆಂದರೇನೇ ಸೌಹಾರ್ದ, ಪರ್ಯಾಯವೇ ಅದಕ್ಕೆ ನಿದರ್ಶನ
ಉಡುಪಿ: ಪೇಜಾವರ ಶ್ರೀಗಳು ಹಿಂದೂ ಧರ್ಮ ರಕ್ಷಣೆಗೆ ಶ್ರಮಿಸುತ್ತಿದ್ದಾರೆ ಎಂದರೆ ಅವರ ವಿರುದ್ಧ ಕೋಮುವಾದಿ ಎಂದು ಟೀಕಿಸಲಾಗುತ್ತದೆ. ಅವರು ಮುಸ್ಲಿಮರಿಗೆ ಮಠದಲ್ಲಿ ಪ್ರವೇಶ ನೀಡಿದರೆ ಎಲ್ಲ ನಾಟಕ ಎಂದು ಜರಿಯುತ್ತಾರೆ. ಆದರೂ ಉಡುಪಿಯ ಅಷ್ಟಮಠಗಳು ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮಾತ್ರ ಎಂದಿಗೂ ಸೌಹಾರ್ದ ಮೆರೆಯುತ್ತಾರೆ.
ಈಗ ಅಂಥಾದ್ದೇ ಮತ್ತೊಂದು ನಿದರ್ಶನಕ್ಕೆ ಉಡುಪಿ ಸಾಕ್ಷಿಯಾಗಲಿದ್ದು, ಜನವರಿ 18ರಂದು ನಡೆಯುವ ಪಲಿಮಾರು ಮಠದ ಪರ್ಯಾಯೋತ್ಸವದಲ್ಲಿ ನೂರಾರು ಮುಸ್ಲಿಂ ಯುವಕರು ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೊದಲಿನಿಂದಲೂ ಅಷ್ಟಮಠಗಳೊಂದಿಗೆ ನಿಕಟ ಸಂಬಂಧಹೊಂದಿರುವ ಉಡುಪಿಯ ಮುಸ್ಲಿಂ ಯುವ ಮನಸ್ಸುಗಳು ಪರ್ಯಾಯೋತ್ಸವದಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿವೆ ಎಂದು ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ಅಧ್ಯಕ್ಷ ಮೊಹಮ್ಮದ್ ಆರೀಫ್ ತಿಳಿಸಿದ್ದಾರೆ. ಪರ್ಯಾಯೋತ್ಸವದಲ್ಲಿ ರಕ್ತದಾನ, ಹೊರೆಕಾಣಿಕೆ ಸೇರಿ ಹಲವು ರೀತಿಯಾಗಿ ಸೇವೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗೋರಕ್ಷಣೆಗೂ ಬೆಂಬಲ
ಮುಸ್ಲಿಮರು ಎಂದ ತಕ್ಷಣ ಗೋಭಕ್ಷರಕು ಎಂದೇ ಭಾವಿಸಲಾಗುತ್ತದೆ. ಆದರೆ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವ ಯುವಕರು ಗೋರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ಅಲ್ಲದೆ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವ ಜನರಿಂದ ಗೋರಕ್ಷಣೆಗಾಗಿ ಸುಮಾರು 10 ಸಾವಿರಕ್ಕೂ ಅಧಿಕ ಜನರಿಂದ ಸಹಿ ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಎರಡು ವರ್ಷಗಳ ಹಿಂದೆ ಸಹ ನಡೆದ ಪರ್ಯಾಯೋತ್ಸವ ನಡೆದಾಗ ನೂರಾರು ಮುಸ್ಲಿಂ ಯುವಕರು ಸೇವೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಕರಾವಳಿ ಕೋಮುಸಂಘರ್ಷಕ್ಕೆ ಹೆಸರಾಗುತ್ತಿರುವ ಮಧ್ಯೆಯೇ ಕೋಮುಸೌಹಾರ್ದದ ಪ್ರತೀಕವಾಗಿ ಪರ್ಯಾಯೋತ್ಸವದಲ್ಲಿ ಮುಸ್ಲಿಂ ಯುವಕರು ಸೌಹಾರ್ದ ಮೆರೆಯುತ್ತಿರುವುದು ಸ್ವಾಗತಾರ್ಹವಾಗಿದೆ.
Leave A Reply