2019ರ ವೇಳೆಗೆ ದೇಶದ ಪ್ರತಿ ರೈಲು ನಿಲ್ದಾಣ ಹೈಫೈ, ಸಿಗಲಿದೆ ಉಚಿತ ವೈಫೈ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯುತ್ತಲೇ ದೇಶ ಡಿಜಿಟಲೀಕರಣವಾಗುತ್ತಿದ್ದು, ಇದರ ಭಾಗವಾಗಿ ಕಳೆದ ಬಜಟ್ ನಲ್ಲಿ ರಾಷ್ಟ್ರದ ರೈಲು ಹಾಗೂ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಪಾರ ಹಣ ಮೀಸಲಿಟ್ಟಿದ್ದರು. ಈ ದಿಸೆಯಲ್ಲಿ ಹಲವು ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿರುವುದು ಸಹ ದಿಟವೇ.
ಈಗ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ 2019ರ ಮಾರ್ಚ್ ವೇಳೆಗೆ ದೇಶದ ಪ್ರತಿಯೊಂದು ರೈಲು ನಿಲ್ದಾಣಗಳಿಗೆ ವೈಫೈ ಸೌಲಭ್ಯ ಕಲ್ಪಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾದ ಭಾಗವಾಗಿ ದೇಶದ ಎಲ್ಲ ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಯೋಜನೆಯ ಜಾರಿಗೆ ಸುಮಾರು 700 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ದೇಶದಲ್ಲಿರುವ 8,500 ರೈಲು ನಿಲ್ದಾಣಗಳಲ್ಲಿ ವೈಫೈ ಲಭ್ಯವಾಗಲಿದೆ. ಪ್ರಸ್ತುತ ರಾಷ್ಟ್ರದ ಪ್ರಮುಖ 216 ರೈಲು ನಿಲ್ದಾಣಗಳಲ್ಲಿ ಮಾತ್ರ ಉಚಿತ ವೈಫೈ ಸೌಲಭ್ಯವಿದ್ದು, ಸುಮಾರು 70 ಲಕ್ಷ ಜನರಿಗೆ ಅಂತರ್ಜಾಲ ಬಳಕೆಗೆ ಅನುಕೂಲವಾಗಿದೆ.
ಪ್ರಸಕ್ತ ವರ್ಷದ ಮಾಚ್ ಅಂತ್ಯದೊಳಗೆ 600 ರೈಲು ನಿಲ್ದಾಣಗಳಿಗೆ ವೈಫೈ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 2019ರ ವೇಳೆಗೆ ಯೋಜನೆ ಸಮರ್ಪಕವಾಗಿ ಜಾರಿಯಾದರೆ ರೈಲು ಪ್ರಯಾಣಿಕರು ಮಾತ್ರವಲ್ಲ, ರೈಲು ನಿಲ್ದಾಣದ ಸುತ್ತಲಿನ ಜನ ಸಹ ಅಂತರ್ಜಾಲ ಸೌಲಭ್ಯ ಪಡೆಯಲಿದ್ದಾರೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Leave A Reply