ಅಷ್ಟಕ್ಕೂ ಅಮೆರಿಕ ನೀಡಿದ ತಪರಾಕಿಗೆ ಮಣಿದ ಪಾಕಿಸ್ತಾನಕ್ಕೆ ಕಾಡಿದ ಭಯವೇನು?
ಸದಾ ಒಂದಿಲ್ಲೊಂದು ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುವ ಪಾಕಿಸ್ತಾನ, ಉಗ್ರ ಚಟುವಟಿಕೆ, ಉಗ್ರ ಪೋಷಣೆ, ಉಗ್ರರಿಗೆ ಹಣ ಸಂದಾಯ ಮಾಡಿ ಭಾರತದ ಗಡಿಯೊಳಕ್ಕೆ ನುಸುಳುವುದು, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದೆ, ಅಮೆರಿಕ ನೀಡಿದ ಹಣವನ್ನೆಲ್ಲ ಉಗ್ರರಿಗೆ ನೀಡಿ ಉದ್ಧಟತನ ಮೆರೆಯುತ್ತಿದ್ದ ಪಾಕಿಸ್ತಾನವೀಗ ಅಕ್ಷರಶಃ ನಲುಗಿಹೋಗಿದೆ.
ಅಷ್ಟಕ್ಕೂ ಭಯೋತ್ಪಾದನೆಯ ಕಬಂಧ ಬಾಹು ಚಾಚಲು ಅನುವು ಮಾಡಿಕೊಡುತ್ತಿದ್ದ, ಮೊಂಡುತನ ಪ್ರದರ್ಶಿಸುತ್ತಿದ್ದ ಪಾಕಿಸ್ತಾನವೇ ಇದ್ದಕ್ಕಿದ್ದ ಹಾಗೆ ಉಗ್ರ ಸಂಘಟನೆ ವಿರುದ್ಧ ಸಮರ ಸಾರಿದೆ ಗೊತ್ತಾ? ಪಾಕಿಸ್ತಾನಕ್ಕೇಕೆ ಅಮೆರಿಕದ ಅಷ್ಟೊಂದು ಭಯ ಕಾಡುತ್ತಿದೆ? ಈ ನೆರೆರಾಷ್ಟ್ರವೇಕೆ ತೋಯ್ದ ಕೋಳಿಯಂತಾಡುತ್ತಿದೆ? ಆ ದೇಶಕ್ಕೆ ಕಾಡುತ್ತಿರುವ ಅನಿಶ್ಚಿತತೆ ಯಾವುದು? ಒಂದು ವೇಳೆ ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡಿದ್ದರೆ ಆ ರಾಷ್ಟ ಏನಾಗುತ್ತಿತ್ತು?
ಹಾಗೆ ಸುಮ್ಮನೆ ಯೋಚಿಸಿ ನೋಡಿ. ಭಾರತ ಜಾಗತಿಕವಾಗಿ ಪಾಕಿಸ್ತಾನ ಉಗ್ರ ರಾಷ್ಟ್ರ ಎಂದು ಪದೇಪದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಪಾದಿಸುತ್ತಲೇ ಪಾಕಿಸ್ತಾನ ಚೀನಾದ ಸಹಕಾರ ಪಡೆದಿತ್ತು. ಅಲ್ಲದೆ ಇದೇ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ, ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು.
ಆದರೆ ಭಾರತ ಹಾಗೂ ಅಮೆರಿಕ ಸೇರಿ ಹಲವು ರಾಷ್ಟ್ರಗಳು ಪಾಕಿಸ್ತಾನದ ನಿಲುವನ್ನು ಖಂಡಿಸಿದವೋ ಎಚ್ಚೆತ್ತುಕೊಂಡ ಪಾಕಿಸ್ತಾನ ಸಯೀದ್ ನನ್ನು ಮತ್ತೆ ಗೃಹಬಂಧನಕ್ಕೆ ಸೇರಿಸಿತು. ಅದಾದ ಬಳಿಕ ಕೆಲಕಾಲ ಸುಮ್ಮನಿದ್ದು, ಮತ್ತೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಸೈನಿಕರನ್ನು ಬಿಟ್ಟು ಭಾರತದ ವಿರುದ್ಧ ಕಾಲುಕೆದರಿಕೊಂಡು ಜಗಳಕ್ಕೆ ಬಂತು.
ಇಷ್ಟೆಲ್ಲ ಉಪಟಳ ಮಾಡುತ್ತಿರುವ ಬೆನ್ನಲ್ಲೇ ಅಮೆರಿಕ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿತು. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ,”ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದ್ದು, 15 ವರ್ಷಗಳಿಂದ ಉಗ್ರರು ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ನೀಡಿದ್ದ 2.1 ಲಕ್ಷ ಕೋಟಿ ರೂಪಾಯಿಯನ್ನು ಪಾಕಿಸ್ತಾನ ಸಮರ್ಪಕವಾಗಿ ಬಳಸದೆ, ಉಗ್ರ ಪೋಷಣೆಯಲ್ಲಿ ತೊಡಗಿದೆ. ಇನ್ನುಮೇಲೆ ನೆರವು ನೀಡಲು ಸಾಧ್ಯವಿಲ್ಲ” ಎಂದು ಘೋಷಿಸಿಬಿಟ್ಟರು.
ಇದರಿಂದ ತೀರಾ ಕಂಗಾಲಾದ ಪಾಕಿಸ್ತಾನ ಕೊನೆಗೂ ಎಚ್ಚೆತ್ತುಕೊಂಡಿದ್ದು ಹಫೀಜ್ ಸಯೀದ್ ನ ಜಮಾತ್ ಉದ್ ದವಾ ಸೇರಿ 72 ಉಗ್ರ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಅಲ್ಲದೆ ಹಫೀಜ್ ಸಯೀದ್ ಹಾಗೂ ಅಜರ್ ಮಸೂದ್ ನಂತಹ ಉಗ್ರರು ಹಾಗೂ ಅಂತಹವರ ನೇತೃತ್ವದ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು, ದೇಣಿಗೆ ನೀಡಿದರೆ, ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ.
ಇದಕ್ಕೆ ಕಾರಣಗಳೂ ಇವೆ. ಭಾರತ ಹಾಗೂ ಅಮೆರಿಕ ಸೇರಿ ಹಲವು ರಾಷ್ಟ್ರಗಳು ಪಾಕಿಸ್ತಾನವನ್ನು ಜಾಗತಿಕ ಉಗ್ರ ಪೋಷಣೆಯ ರಾಷ್ಟ್ರ ಎಂಬಂತೆ ಬಿಂಬಿಸುತ್ತಿವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಂತೂ ಎಲ್ಲಿಗೇ ಹೋದರೂ, ಯಾವುದೇ ಅಂತಾರಾಷ್ಟ್ರೀಯ ವೇದಿಕೆ ಸಿಕ್ಕರೂ ಪಾಕಿಸ್ತಾನದ ಭಯೋತ್ಪಾದನೆ ಪೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ.
ಅಲ್ಲದೆ ಇತ್ತೀಚೆಗೆ ಅಮೆರಿಕ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ತಯಾರಿಸಿದ ಉಗ್ರರ ಪಟ್ಟಿಯಲ್ಲಿ ಸೇರಿಸದ ಕಾರಣ ಆಕ್ರೋಶ ವ್ಯಕ್ತಪಡಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆರ್ಥಿಕ ನೆರವು ನೀಡುವುದಿಲ್ಲ ಎಂದು ಎಚ್ಚರಿಸಿದೆ.
ಇದರಿಂದ ಕಂಗಾಲಾದ ಪಾಕಿಸ್ತಾನ ತಾನು ಜಾಗತಿಕ ಮಟ್ಟದಲ್ಲಿ ಉಗ್ರ ಪೋಷಣೆಯ ರಾಷ್ಟ್ರವಾಗಿ, ಅಭಿವೃದ್ಧಿಗೆ ಹಣ ಸಿಗದೆ ಬರಿಗೈ ದಾಸನಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿ ಹಾಗೂ ಬಹಿಷ್ಕಾರಕ್ಕೆ ಒಳಗಾಗುತ್ತೇನೆ ಎಂಬ ಭಯದಿಂದ ಈ ನಿರ್ಧಾರಕ್ಕೆ ಬಂದಿದೆ ಎಂಬುದು ಸ್ಪಷ್ಟ. ಇಲ್ಲದಿದ್ದರೆ ದೇಶ ನಡೆಸುವುದು ಕಷ್ಟ ಎಂಬುದೂ ಪಾಕಿಸ್ತಾನಕ್ಕೆ ತಿಳಿದಿರುವ ಸಂಗತಿಯೇ. ಆದರೆ ಅದನ್ನು ಎಷ್ಟರಮಟ್ಟಿಗೆ ನಿಷ್ಠೆಯಿಂದ ಪಾಲಿಸುತ್ತದೆ ಎಂಬುದೇ ಪ್ರಶ್ನೆ.
Leave A Reply