ಏ ಏನ್ ಚಮಚಾಗಿರಿ ಮಾಡ್ತೀರಿ?, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ವೈಜನಾಥ್ ತರಾಟೆ
ಬೆಂಗಳೂರು: ಇತ್ತೀಚೆಗೆ ಕರ್ನಾಟಕಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿರಬಾಗಿ ನಮಸ್ಕರಿಸಿದ್ದಕ್ಕೇ ಕೆಲವು ಕಾಂಗ್ರೆಸ್ಸಿಗರು ಇದು ಚಮಚಾಗಿರಿ ಎಂಬಂಥ ಮಾತನಾಡಿದ್ದರು. ಆದರೆ ಅಂಥಾದ್ದೇ ಮಾತುಗಳು ಈಗ ಕೆಪಿಸಿಸಿ ಅಧ್ಯಕ್ಷರಿಗೇ ಎದುರಾಗಿವೆ.
ಹೌದು, ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವೈಜನಾಥ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ “ಚಮಚಾಗಿರಿ ಮಾಡ್ತೀರಿ” ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಕೈಗೊಂಡ ಪ್ರವಾಸದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಮಾತನಾಡುವ ವೇಳೆ ವೈಜನಾಥ್ ಪಾಟೀಲ್ ಸಭಾಂಗಣಕ್ಕೆ ಆಗಮಿಸಿದ್ದಾರೆ. ಅಲ್ಲದೆ ತಮ್ಮ ಬೇಡಿಕೆಯನ್ನು ಪರಮೇಶ್ವರ್ ಅವರ ಬಳಿ ಇಡಲು ಪಾಟೀಲ್ ಯತ್ನಿಸಿದ್ದಾರೆ. ಆಗ ಪರಮೇಶ್ವರ್ ಅವರು ಸುದ್ದಿಗೋಷ್ಠಿ ಬಳಿಕ ಮಾತನಾಡೋಣ ಎಂದು ಪಕ್ಕದಲ್ಲಿ ಕೂರಿಸಿದ್ದರು.
ಆದರೆ ಮಾಧ್ಯಮದವರು ಪರಮೇಶ್ವರ್ ಅವರನ್ನು ನೀವು ಬಿಜೆಪಿಗೆ ಸೇರುತ್ತೀರಿ ಎಂಬ ಮಾತುಗಳಿವೆ ಎಂದಾಗ ಪರಮೇಶ್ವರ್ ಕುಪಿತರಾಗಿದ್ದಾರೆ. ಆಗ ಮೈಕ್ ಬಿಟ್ಟು ವೇದಿಕೆಯಿಂದ ಕೆಳಗಿಳಿಯುವಾಗ ವೈಜನಾಥ್ ಪಾಟೀಲ್ ಅವರು, ಏನ್ರೀ ಅಧ್ಯಕ್ಷರೇ, ನಾನು ಮಾತನಾಡಲು ಬಂದಿದ್ದೇನೆ, ನೀವು ಹೊರಟಿದ್ದೀರಲ್ಲ ಎಂದು ಪ್ರಶ್ನಿಸಿದ್ದಾರೆ.
ಇಷ್ಟಾದರೂ ಪರಮೇಶ್ವರ್ ಅವರು ನಿಲ್ಲದ ಕಾರಣ, ಏಯ್ ಅಧ್ಯಕ್ಷ, ಎಂದು ಕೂಗಿದ್ದು, ಪರಮೇಶ್ವರ್ ಹೊರಟ ಕಾರಣ “ಏ ಚಮಚಾ” ಎಂದು ಕರೆದಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯಲ್ಲೂ ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ವೈಜನಾಥ್, “ಧರಂ ಸಿಂಗ್ ಮಕ್ಕಳಿಗೆ ಮಾತ್ರ ಎಂಎಲ್ಎ, ಎಂಎಲ್ಸಿ ಟಿಕೆಟ್ ನೀಡುತ್ತೀರಿ. ನಮ್ಮ ಮಕ್ಕಳಿಗೇಕೆ ನೀಡುತ್ತಿಲ್ಲ? ನೀವೇನು ಚಮಚಾಗಿರಿ ಮಾಡುತ್ತಿದ್ದೀರಾ?” ಎಂದು ಗುಡುಗಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈಜನಾಥ್ ಪಾಟೀಲ್, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ದಕ್ಷಿಣ ಕರ್ನಾಟಕದವರಾಗಿರುವುದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತಿಲ್ಲ. ಹಾಗಾಗಿ ಇವರಲ್ಲಿ ಒಬ್ಬರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಟಿಕೆಟ್ ಪಡೆಯಲು ಭಾರಿ ಲಾಬಿ ಹಾಗೂ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿರುವ ಭಿನ್ನಮತ ಬಹಿರಂಗವಾಗಿದೆ.
Leave A Reply