ದೇಶ ಕಾಯುವ ಆ ಯೋಧ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನೂ ರಕ್ಷಿಸಿ ಮಾನವೀಯತೆ ಮೆರೆದ!
ದೆಹಲಿ: ಭಾರತೀಯ ಸೈನಿಕರು ಎಂದರೇನೇ ಹಾಗೆ. ಅವರು ಎಲ್ಲೇ ಇರಲಿ, ಹೇಗೆಯೇ ಇರಲಿ, ತಮಗೆ ಯಾವುದೇ ತೊಂದರೆಯಾದರೂ ಬರಲಿ, ದೇಶ ಹಾಗೂ ದೇಶದ ಜನರಿಗೆ ಅವರು ಸದಾ ಸಿದ್ಧ. ಇದು 1962ರ ಚೀನಾ ವಿರುದ್ಧ ನಡೆದ ಯುದ್ಧದಿಂದ ಈ ಕ್ಷಣದವರೆಗೂ ಸಾಬೀತಾಗುತ್ತಲೇ ಇದೆ.
ಈಗ ಇಂಥಾದ್ದೇ ಕರ್ತವ್ಯ ನಿಷ್ಠೆಯನ್ನು ಸಿಆರ್ ಪಿಎಫ್ ಯೋಧರೊಬ್ಬರು ಮೆರೆದಿದ್ದು, ಕೆನಾಲ್ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ಸಿಆರ್ ಪಿಎಫ್ ಯೋಧ ಕಾಪಾಡಿದ್ದಾರೆ. ಮಹಿಳೆಯನ್ನು ಲಕ್ಷ್ಮೀ ಪಿ. ಎಂದು ಗುರುತಿಸಲಾಗಿದೆ.
ಹೌದು, ಬವಾನಾ ಪ್ರದೇಶದ ಕೆನಾಲ್ ಒಂದರಲ್ಲಿ ಮಹಿಳೆಯೊಬ್ಬರು ಕಾಲು ಜಾರಿಬಿದ್ದಿದ್ದು, ಮುಳುಗುತ್ತಿದ್ದರು. ಆಗ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಸಿಆರ್ ಪಿಎಫ್ ಯೋಧ ಪ್ರಮೋದ್ ಕುಮಾರ್ ಚೌಹಾಣ್, ಮಹಿಳೆಯನ್ನು ರಕ್ಷಿಸಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿದ ಯೋಧ ಮೊದಲಿಗೆ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ, ನೀರಿಗೆ ಜಿಗಿದು ರಕ್ಷಿಸಿದ್ದಾರೆ. ಬಳಿಕ ಸಿಆರ್ ಪಿಎಫ್ ಶಿಬಿರದಲ್ಲಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮಹಿಳೆ ನರೇಲಾ ಪ್ರದೇಶದ ನಿವಾಸಿಯಾಗಿದ್ದು, ಕಾಲು ಜಾರಿ ನೀರಿಗೆ ಬಿದ್ದಿದ್ದಾಗಿ ತಿಳಿಸಿದ್ದಾರೆ. ಸಿಆರ್ ಪಿಎಫ್ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಿಆರ್ ಪಿಎಫ್ ಯೋಧನ ಸಮಯಪ್ರಜ್ಞೆ ಹಾಗೂ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave A Reply