ಮಾನ್ಯ ಮುಖ್ಯಮಂತ್ರಿಯವರೇ ನಿಮ್ಮದು ಯಾವ ರೀತಿಯಲ್ಲಿ ಭ್ರಷ್ಟಾಚಾರರಹಿತ ಸರ್ಕಾರ ಎಂದು ಹೇಳುವಿರಾ?
ಯಾವುದೇ ವೇದಿಕೆ ಸಿಗಲಿ, ಮೈಕ್ ಸಿಗಲಿ, ಎಲ್ಲೇ ನಾಲ್ಕು ಜನರು ಸೇರಿರುವ ಸಭೆ ಸಿಗಲಿ, ಸಾಮಾಜಿಕ ಜಾಲತಾಣದಲ್ಲಾಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಮಾತ್ರ ಒಂದೇ ವರಾತ…
ನಮ್ಮದು ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಪರ, ಕಳಂಕರಹಿತ ಸರ್ಕಾರ. ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮ, ಅವ್ಯವಹಾರ ನಡೆದೇ ಇಲ್ಲ ಎಂಬಂಥ ಮಾತನಾಡುತ್ತಾರೆ. ತಾವು ಮುಖ್ಯಮಂತ್ರಿಯಾಗಿ ಅವಧಿ ಪೂರೈಸಿದ್ದನ್ನೇ ಮಹಾನ್ ಸಾಧನೆ ಎಂಬಂತೆ ಹೇಳುತ್ತಾರೆ.
ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಕಳಂಕ ರಹಿತ ಸರ್ಕಾರವಾ? ಇವರ ಅವಧಿಯಲ್ಲಿ ಯಾವುದೇ ಅಕ್ರಮ, ಭ್ರಷ್ಟಾಚಾರ ನಡೆದೇ ಇಲ್ಲವಾ? ಅಷ್ಟರಮಟ್ಟಿಗೆ ಈ ಸರ್ಕಾರ ನಿಜವಾಗಿಯೂ ಅಭಿವೃದ್ಧಿ ಪರವಾ?
ಮುಖ್ಯಮಂತ್ರಿಯವರು ಚುನಾವಣೆ ಹೊಸ್ತಿಲಿನಲ್ಲಿ ಯಾರನ್ನು ಮರುಳು ಮಾಡಲು ಹೊರಟಿದ್ದಾರೆ? ಯಾರ ಕಿವಿ ಮೇಲೆ ಹೂ ಇಡಲು ಹೊರಟಿದ್ದಾರೆ?
ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲ್ ಸರ್ವೇ ನಂ 1ರಲ್ಲಿರುವ ಮೈಸೂರು ಮಹಾರಾಜರ ಸ್ವತ್ತನ್ನು ಕಬಳಿಸಿದ್ದಲ್ಲದೇ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವವರಿಗೆ ಸಹಕಾರ ಹಾಗೂ ನೆರವು ನೀಡುತ್ತಿರುವ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 8 ಜನರ ವಿರುದ್ಧ ಮಂಡ್ಯ ಲೋಕಾಯುಕ್ತಕ್ಕೆ ಅದಾಗಲೇ ದೂರು ನೀಡಲಾಗಿದೆ.
ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನ ಕೆಳಗಡೆಯೇ ಎಂಎಂಎಲ್ ಮತ್ತು ಸುಬ್ಬರಾಯನಹಳ್ಳಿ ಗಣಿ ಪ್ರದೇಶದಲ್ಲಿ 5500 ಕೋಟಿ ರೂ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ದಾಖಲೆ ಸಮೇತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಹಿತಿ ನೀಡಿದ್ದಾರೆ.
ಇದೆಲ್ಲ ಏನನ್ನು ತೋರಿಸುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಕಳಂಕರಹಿತ ಆಡಳಿತ ನೀಡುವುದು ಎಂದರೆ ಇದೇನಾ ನಿಮ್ಮ ಪ್ರಕಾರ? ಯಾವ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರನ್ನು ಟೀಕಿಸಿದ್ದ ನೀವೇ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದೀರಾ? ಈ ಎಲ್ಲ ಆರೋಪಗಳ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ? ಅಷ್ಟಕ್ಕೂ ಬೆಂಕಿ ಇಲ್ಲದೆಯೇ ಹೊಗೆಯಾಡುತ್ತದೆಯೇ?
ನೀವು ಆಡಳಿತಕ್ಕೆ ಬರುತ್ತಲೇ ಸೀಮಿತ ವರ್ಗಕ್ಕೆ ಯೋಜನೆ ಜಾರಿಗೊಳಿಸಿದಿರಿ. ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿದಿರಿ. ಎಂ.ಕೆ.ಗಣಪತಿ ಸಾವಿನ ಪ್ರಕರಣದಲ್ಲಿ ನಿಮ್ಮ ಸಚಿವರ ರಕ್ಷಣೆಗೆ ಮುಂದಾದಿದಿರಿ. ಮತಾಂಧ ಟಿಪ್ಪು ಸುಲ್ತಾನ ಜಯಂತಿ ಆಚರಿಸಿ ಈಗ ಹಿಂದು ಎಂಬ ನಾಟಕವಾಡುತ್ತಿದ್ದೀರಿ. ದುಬಾರಿ ವಾಚಿನ ಮೂಲಕ ಸದ್ದು ಮಾಡಿದಿರಿ. ನಿಮ್ಮದೇ ಸರ್ಕಾರದ ಮೇಟಿಯ ರಾಸಲೀಲೆಯನ್ನು ಕರ್ನಾಟಕವೇ ನೋಡಿದರೂ ಅವರಿಗೆ ಕ್ಲೀನ್ ಚಿಟ್ ಸಿಗುವಂತಾಯಿತು. ನಿಮ್ಮದೇ ಸರ್ಕಾರದ ಸಚಿವರೊಬ್ಬರು ರೆಸಾರ್ಟ್ ರಾಜಕಾರಣ ಮಾಡಿದರು. ಹೇಳಿ ಮುಖ್ಯಮಂತ್ರಿಯವರೇ ನಿಮ್ಮದು ಕಳಂಕ, ನಿಷ್ಪಕ್ಷಪಾತ, ಪಾರದರ್ಶಕತೆಯುಳ್ಳ ಸರ್ಕಾರವಾ?
Leave A Reply