2024ರ ವೇಳೆಗೆ ಭಾರತ ಆಗಲಿದೆ ಹಿಂದೂ ರಾಷ್ಟ್ರ
ಲಖನೌ: 2024ರ ವೇಳೆಗೆ ಭಾರತ ಸಂಪೂರ್ಣವಾಗಿ ಹಿಂದೂ ರಾಷ್ಟ್ರವಾಗಲಿದೆ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಮುಸ್ಲಿಮರು ಸಹ ಹಿಂದೂ ಧರ್ಮದ, ಆಚರಣೆಯೊಂದಿಗೆ ಸಮೀಕರಣಗೊಳ್ಳುತ್ತಾರೆ. ಒಂದು ವೇಳೆ ಹಿಂದುತ್ವದಿಂದ ಮುಕ್ತಿ ಪಡೆಯಲು ಇಚ್ಛಿಸಿದರೆ ಬೇರೆ ರಾಷ್ಟ್ರಕ್ಕೆ ತೆರಳುತ್ತಾರೆ ಎಂದಿದ್ದಾರೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಅವತಾರ ಪುರುಷ” ಎಂದು ಸುರೇಂದ್ರ ಸಿಂಗ್ ಕರೆದಿದ್ದಾರೆ. 2025ರವೇಳೆಗೆ ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷವಾಗುತ್ತದೆ. ಅದಕ್ಕೂ ಒಂದು ವರ್ಷ ಮೊದಲು, ಅಂದರೆ 2024ರ ವೇಳೆಗೆ ಹಿಂದೂ ರಾಷ್ಟ್ರವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತ ಮಹೋನ್ನತ ನಾಯಕರು ಇರುವ ಕಾರಣದಿಂದಲೇ ಭಾರತ ಜಾಗತಿಕ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಇವರ ಅವಧಿಯಲ್ಲಿ ಭಾರತ ವಿಶ್ವಗುರುವಾಗುವುದಲ್ಲದೆ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯ್ದ ಸಿಂಗ್, “ರಾಹುಲ್ ಗಾಂಧಿಯವರಲ್ಲಿ ಇಟಲಿ ಹಾಗೂ ಭಾರತದ ವಿಚಾರಗಳು ಮಿಕ್ಸ್ ಆಗಿವೆ. ಹಾಗಾಗಿ ಅವರು ಸಂಪೂರ್ಣವಾಗಿ ಭಾರತದ ವಿಚಾರಗಳಿಗೆ ಒಗ್ಗಿಕೊಳ್ಳುವುದಿಲ್ಲ” ಎಂದು ಟೀಕಿಸಿದ್ದಾರೆ. ಸುರೇಂದ್ರ ಸಿಂಗ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದೆ.
Leave A Reply