ಅರವಿಂದ್ ಕೇಜ್ರಿವಾಲ್ ಅವರಿಗೆ ಅಣ್ಣಾ ಹಜಾರೆ ಪರೋಕ್ಷ ಟಾಂಗ್ ನೀಡಿದ್ದು ಹೇಗೆ ಗೊತ್ತಾ?
ದೆಹಲಿ: ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಆಡಳಿತದಿಂದ ಬೇಸತ್ತಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪರೋಕ್ಷವಾಗಿ ಕೇಜ್ರಿವಾಲ್ ಅವರಿಗೆ ಟಾಂಗ್ ನೀಡಿದ್ದಾರೆ.
ಮುಂದೆ ನಾನು ನಡೆಸುವ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವ ಯಾರೂ ರಾಜಕಾರಣ ಸೇರುವುದಿಲ್ಲ ಎನ್ನುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಟಾಂಗ್ ನೀಡಿದ್ದಾರೆ.
2011ರಲ್ಲಿ ನಾನು ಆರಂಭಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವವರ ಕುರಿತು ಎಚ್ಚರದಿಂದ ಇರಲಿಲ್ಲ. ಆದರೆ ಮುಂದೆ ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವ ಯಾವುದೇ ವ್ಯಕ್ತಿಯೂ ರಾಜಕೀಯ ಸೇರಲ್ಲ, ರಾಜಕೀಯ ಮಾಡಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಅಣ್ಣಾ ಹಜಾರೆ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.
2011ರಲ್ಲಿ ಜನಲೋಕಪಾಲ ಬಿಲ್ ಜಾರಿಗಾಗಿ ಬೃಹತ್ ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಿದ್ದ ಅಣ್ಣಾ ಹಜಾರೆ ಅವರು ಇಡೀ ದೇಶದ ಗಮನ ಸೆಳೆದಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧದ ಅವರ ಹೋರಾಟಕ್ಕೆ ಅಪಾರ ಜನ ಬೆಂಬಲ ಸೂಚಿಸಿದ್ದರು.
ವಕೀಲರಾಗಿದ್ದ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದರು. ಅಲ್ಲದೆ ಅಣ್ಣಾ ಹಜಾರೆಯವರ ವಿರೋಧ, ಆಕ್ಷೇಪದ ನಡುವೆಯೂ ಆಮ್ ಆದ್ಮಿ ಪಾರ್ಟಿ ಕಟ್ಟಿ ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಆದರೆ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರ, ವಿವಾದಾತ್ಮಕ ಹೇಳಿಕೆ, ದೆಹಲಿಯಲ್ಲಿ ಅತ್ಯಾಚಾರ ಸೇರಿ ಹಲವು ಪ್ರಕರಣ ತಡೆಯುವಲ್ಲಿ ವಿಫಲ ಸೇರಿ ಹಲವು ಕಾರಣಗಳಿಂದ ಅಣ್ಣಾ ಹಜಾರೆಯವರು ಅರವಿಂದ್ ಕೇಜ್ರಿವಾಲ್ ಬಗ್ಗೆ ಅಸಮಾಧಾನವಿದೆ ಎನ್ನಲಾಗುತ್ತಿದೆ.
ಅಲ್ಲದೆ ತಮ್ಮ ಹೋರಾಟದಿಂದ ಮುಂದೆಯೂ ಮತ್ತೊಬ್ಬ ರಾಜಕಾರಣಿ ಉದಯಿಸುವುದು ಹಜಾರೆಯವರಿಗೆ ಇಷ್ಟವಿಲ್ಲದ ಕಾರಣ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Leave A Reply