ದಕ್ಷಿಣ ಕನ್ನಡದಲ್ಲಿ ಮತ್ತೆ ಕಾಣಿಸಿಕೊಂಡ ಕೆಂಪು ಉಗ್ರರು…?
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಬಳಿಯ ಮನೆಗಳಿಗೆ ಭಾನುವಾರ ಸಂಜೆ ನಾಲ್ವರು ಶಂಕಿತ ನಕ್ಸಲರ ತಂಡ ಭೇಟಿ ನೀಡಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.
ಭಾನುವಾರ ಸಂಜೆ ಲೀಲಾ ಎಂಬುವರ ಮನೆಗೆ ಮೂವರು ಗಂಡಸರು ಮತ್ತು ಒಬ್ಬ ಮಹಿಳೆಯ ಶಸ್ತ್ರಸಜ್ಜಿತ ನಕ್ಸಲರ ತಂಡ ಭೇಟಿ ನೀಡಿದೆ ಎನ್ನಲಾಗಿದೆ. ನಾವು ನಕ್ಸಲರು, ನಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜ್ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ ನಮಗೆ ಹೊಟ್ಟೆ ಹಸಿದಿದ್ದು, ಊಟ ನೀಡಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಶಂಕಿತ ನಕ್ಸಲರು ಮಲೆಯಾಳಿ, ತಮಿಳು, ತುಳು ಭಾಷೆಯಲ್ಲಿ ಮಾತಾಡುತ್ತಿದ್ದರು ಎನ್ನಲಾಗಿದೆ. ಅಡುಗೆ ಸಾಮಾನು ಪಡೆದು ಮರಳಿ ಕಾಡಿಗೆ ಹೋಗಿದ್ದಾರೆ ಎನ್ನಲಾಗಿದೆ.
ಸೋಮವಾರ ಸಂಜೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನಾನಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ನಕ್ಸಲರ ಹಾವಳಿ ಈ ಘಟನೆಯಿಂದ ಮರುಜೀವ ಪಡೆದುಕೊಂಡಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದರೆ, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
Leave A Reply