2 ವರ್ಷದಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಲ್ಲೆಸೆಯುತ್ತಿದ್ದ 11,290 ಜನರ ಬಂಧನ
ಜಮ್ಮು: ಕಾಶ್ಮೀರ ಪ್ರತ್ಯೇಕ ರಾಷ್ಟ್ರದ ನೆಪದಲ್ಲಿ ಕಣಿವೆ ರಾಜ್ಯದಲ್ಲಿ ಪೊಲೀಸರು, ಸೈನಿಕರು ಮತ್ತು ಅಧಿಕಾರಿಗಳ ಮೇಲೆ ಕಲ್ಲೆಸೆದು ಜನರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ 11,290 ಜನರನ್ನು ಎರಡು ವರ್ಷದಲ್ಲಿ ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಿಧಾನಸಭೆಗೆ ತಿಳಿಸಿದೆ.
ಬಿಜೆಪಿ ಶಾಸಕ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹೆಬೂಬಾ ಮುಫ್ತಿ ‘ಎರಡು ವರ್ಷದಲ್ಲಿ 11,290 ಜನರನ್ನು ಬಂಧಿಸಿದ್ದು, ಕಲ್ಲು ಎಸೆಯುತ್ತಿದ್ದವರ ವಿರುದ್ಧ 3773 ಎಫ್ ಐ ಆರ್ ದಾಖಲಿಸಲಾಗಿದೆ. ಅದರಲ್ಲಿ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2008 ರಿಂದ 2017ರ ವರೆಗೆ ಬಂಧಿಸಲಾಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೆ ಕೆಲವು ನಿಬಂಧನೆಗಳನ್ನು ಹೇರಲಾಗಿದೆ. ಪ್ರಕರಣದಲ್ಲಿ ದಾಖಲಾದವರ ಪೋಷಕರು ಮತ್ತೊಮ್ಮೆ ನಮ್ಮ ಮಕ್ಕಳನ್ನು ಇಂತಹ ಹೀನ ಕೃತ್ಯಕ್ಕೆ ಇಳಿಸುವುದಿಲ್ಲ ಎಂದು ಹೇಳಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಆರೋಪಿಗಳು ಹೇಳಬೇಕು. ಭವಿಷ್ಯದಲ್ಲಿ ಮತ್ತೆ ಇಂತಹ ಕಾರ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರೇ ಮಾತ್ರ ಅವರ ವಿರುದ್ಧ ಪ್ರಕರಣ ಹಿಂಪಡೆಯಲಾಗುವುದು ಎಂದು ತಿಳಿಸಿದರು.
ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವ ಯುವಕರನ್ನು ಸಾಮಾಜದ ಮುನ್ನೆಲೆಗೆ ತರಬೇಕು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಯುವಕರನ್ನು ಮೂಲಭೂತವಾದಿಗಳತ್ತ ಸೆಳೆಯಲು ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸುತ್ತಿದೆ.
ಆಯಾ ಪೊಲೀಸ್ ಠಾಣೆಯಲ್ಲಿ ಗ್ರಾಮದ ಹಿರಿಯ ಸಭೆ ಕರೆದು ರಾಜ್ಯದ ಅಭಿವೃದ್ಧಿಗೆ ಯುವಕರ ಸೇವೆಯನ್ನು ಬಳಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಯುವಕರು ಮೂಲಭೂತವಾದಿಗಳ ಹಿಡಿತದಿಂದ ಹೊರ ಬರಲು, ತಪ್ಪು ದಾರಿ ತುಳಿಯದಂತೆ ಕ್ರಮ ಕೈಗೊಳ್ಳಲು ಶ್ರಮಿಸಲಾಗುತ್ತಿದೆ ಎಂದು ಮುಫ್ತಿ ಹೇಳಿದರು.
Leave A Reply