ನಾನು ಮೋದಿಯಾಗಿ ದೇಶವನ್ನು ಪ್ರತಿನಿಧಿಸಲ್ಲ, 125 ಕೋಟಿ ಜನರ ಜನಪ್ರತಿನಿಧಿಯಾಗುವೆ
ನಾನು ಕೇವಲ ನರೇಂದ್ರ ಮೋದಿಯಾಗಿ ಭಾರತವನ್ನು ಪ್ರತಿನಿಧಿಸಲ್ಲ. ಬದಲಾಗಿ 125 ಕೋಟಿ ಜನರ ಪ್ರತಿನಿಧಿಯಾಗಿ, ಅವರ ಧ್ವನಿಯಾಗಿ ಪ್ರತಿನಿಧಿಸ ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜೀ ನ್ಯೂಸ್ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನದಲ್ಲಿ ಈ ಕುರಿತು ಉಲ್ಲೇಖಿಸಿರುವ ಅವರು, ನಾನು ಪ್ರತಿ ಭಾರತೀಯನ ಪ್ರತಿನಿಧಿ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಸ್ವಿಡ್ಜರ್ ಲೆಂಡ್ ನಲ್ಲಿ ನಡೆಯುವ ವಿಶ್ವ ಆರ್ಥಿಕ ಫೋರಂನಲ್ಲಿ ಭಾರತದ ಸ್ಥಾನ ಎಂಥಾದ್ದು ಎಂದು ವಾಹಿನಿಯ ಸುದ್ದಿ ಸಂಪಾದಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ ಅವರು, “ಇಡೀ ವಿಶ್ವವೇ ಭಾರತದೊಂದಿಗೆ ನೇರವಾಗಿ ಸಂಪರ್ಕಿಸಲು ಬಯಸುತ್ತಿದೆ” ಎಂದು ತಿಳಿಸಿದ್ದಾರೆ.
ಪರೋಕ್ಷವಾಗಿ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಕುಟುಕಿದ ಪ್ರಧಾನಿ, “2014ರಲ್ಲಿ ಜಗತ್ತಿನ ಮಾಧ್ಯಮಗಳಲ್ಲಿ ಭಾರತದ ಕುರಿತು ಯಾವ ವಿಷಯ ವರದಿಯಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ 2014ರಲ್ಲಿ ಭಾರತದಲ್ಲಿ 30 ವರ್ಷಗಳ ಬಳಿಕ ಜನ ಒಂದೇ ಪಕ್ಷಕ್ಕೆ ಬಹುಮತ ನೀಡಿದ್ದು, ಪ್ರಸ್ತುತ ಭಾರತ ಎಂದರೇನೆ ಜಗತ್ತಿನಲ್ಲಿ ವಿಶಿಷ್ಟ ಸ್ಥಾನಮಾನ ಸಿಕ್ಕಿದೆ. ಭಾರತ ಎಂದರೆ ಎಲ್ಲರೂ ಕುತೂಹಲದ ಕಣ್ಣುಗಳನ್ನು ಅರಳಿಸುತ್ತಾರೆ” ಎಂದಿದ್ದಾರೆ.
ನನ್ನನ್ನು ಮೊದಲು ಗುಜರಾತಿನ ಜನರ ನಾಡಿಮಿಡಿತ ಅಷ್ಟೇ ಗೊತ್ತಿರುವವ ಎಂದು ಟೀಕಿಸಿದರು. ಆದರೆ ನಾನು ನನ್ನ ಬಲವನ್ನು ತೋರಿಸಿದೆ. ಇಡೀ ದೇಶದ ಜನರ ನಾಡಿಮಿಡಿತ ಅರಿತೆ. ಪ್ರಸ್ತುತ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ನಾನು ಗೆಳೆಯ. ವಿಶ್ವವೇ ಭಾರತವನ್ನು ಗುರುತಿಸುವಂತಾಗಿದೆ ಎಂದು ಸಂದರ್ಶನದ ವೇಳೆ ಪ್ರಧಾನಿಯವರು ಹೆಮ್ಮೆಯಿಂದ ಹೇಳಿದ್ದಾರೆ.
ಟೀಕೆಗೊಳಗಾಗಿದ್ದ ಜಿಎಸ್ಟಿ ಕುರಿತು ಸಹ ಉಲ್ಲೇಖಿಸಿರುವ ಅವರು, “ಭಾರತದಲ್ಲಿ ಕ್ಷಿಪ್ರ ಗತಿಯಲ್ಲಿ ಆರ್ಥಿಕ ಸುಧಾರಣೆಗಳಾಗುತ್ತಿವೆ. ಕಳೆದ ಕೆಲವು ತಿಂಗಳುಗಳಿಂದಲಂತೂ ಭಾರತದ ಆರ್ಥಿಕತೆ ಭಾರಿ ಸುಧಾರಣೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ವಿಶ್ವದ ಪ್ರಮುಖ ನಾಯಕರಾದ ಪುಟಿನ್, ಟ್ರಂಪ್ ಸೇರಿ ಹಲವರ ಪಕ್ಕದಲ್ಲಿ ನಿಂತಾಗಲೆಲ್ಲ ನನಗೆ ಹೆಮ್ಮೆಯಾಗುತ್ತದೆ. 125 ಕೋಟಿ ಜನರ ಪ್ರತಿನಿಧಿಯಾಗಿ ನಿಲ್ಲುತ್ತೀನಲ್ಲ, ದೇಶದ ಜನ ನನಗೆ ಇಂಥದ್ದೊಂದು ಅವಕಾಶ ನೀಡಿದರಲ್ಲ ಎಂದು ಹೆಮ್ಮೆ ಎನಿಸುತ್ತದೆ. ಆಗೆಲ್ಲ ನಮ್ಮ ದೇಶವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂಬ ಮಹದಾಸೆ ಪಕಳೆಯೊಡೆಯುತ್ತಿದೆ ಎಂದು ಮೋದಿ ಮನದಾಳ ಬಿಚ್ಚಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಟಿವಿಯೊಂದಕ್ಕೆ ನೀಡಿದ ಮೊದಲ ಸಂದರ್ಶನ ಇದಾಗಿದ್ದು, ಹಲವು ವಿಷಯಗಳ ಬಗ್ಗೆ ಮೋದಿ ಅವರು ಮಾತನಾಡಿದ್ದಾರೆ. ಇಂದು ಸಂಜೆ 8 ಗಂಟೆಗೆ ಜೀ ನ್ಯೂಸ್ ನಲ್ಲಿ ಸಂದರ್ಶನದ ಪೂರ್ಣ ಭಾಗ ಪ್ರಸಾರವಾಗಲಿದೆ.
ಕೃಪೆ-ಜೀ ನ್ಯೂಸ್
Leave A Reply