ಆಪ್ ಗೆ ಕುತ್ತು, 20 ಶಾಸಕರ ಅನರ್ಹಗೊಳಿಸುವಂತೆ ಚುನಾವಣೆ ಆಯೋಗ ಶಿಫಾರಸು
ದೆಹಲಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರಿಗೆ ಕುತ್ತು ಎದುರಾಗಿದ್ದು, ಆಪ್ ನ 20 ಶಾಸಕರನ್ನು ಅನರ್ಹಗೊಳಿಸುವಂತೆ ಕೇಂದ್ರ ಚುನಾವಣೆ ಆಯೋಗ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಆಮ್ ಆದ್ಮಿ ಪಕ್ಷದ 20 ಶಾಸಕರು ಲಾಭದಾಯಕ ಹುದ್ದೆ ಹೊಂದಿರುವ ಆರೋಪದಲ್ಲಿ ಕೇಂದ್ರ ಚುನಾವಣೆ ಆಯೋಗ ಅನರ್ಹಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಿಫಾರಸಿನ ಕುರಿತು ಪರೋಕ್ಷವಾಗಿ ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ, “ರಾಷ್ಟ್ರಪತಿಯವರಿಗೆ ಸಲ್ಲಿಸಿದ ಶಿಫಾರಸಿನಲ್ಲಿ ಏನಿದೆ ಎಂಬುದರ ಕುರಿತು ಮಾತನಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ವಕೀಲ ಪ್ರಶಾಂತ್ ಪಟೇಲ್ ಎಂಬುವವರು ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷದ 20 ಶಾಸಕರು ಹಲವು ಲಾಭದಾಯಕ ಹುದ್ದೆ ಹೊಂದಿದ್ದು, ಅವರ ಶಾಸಕ ಸ್ಥಾನ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಜೂನ್ 2016ರಲ್ಲಿ ಕಾಂಗ್ರೆಸ್ ಸಹ 21 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಮನವಿ ಸಲ್ಲಿಸಿತ್ತು.
ಚುನಾವಣೆ ಆಯೋಗ 21 ಶಾಸಕರ ಪ್ರತಿಕ್ರಿಯೆ ಕೇಳಿತ್ತು. ಆದರೆ ಶಾಸಕರು ಪ್ರಕರಣ ಕೈಬಿಡುವಂತೆ ಕಳೆದ ವರ್ಷ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈಗ ಚುನಾವಣೆ ಆಯೋಗ ಅನರ್ಹಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದ್ದು, ರಾಷ್ಟ್ರಪತಿಯವರ ನಡೆ ಕುತೂಹಲ ಕೆರಳಿಸಿದೆ. ಹಾಗೊಂದು ವೇಳೆ ಅನರ್ಹಗೊಳಿಸಿದರೆ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಹಿನ್ನಡೆಯಾಗಲಿದೆ.
ಆ 20 ಶಾಸಕರು ಯಾರು ಗೊತ್ತಾ?
- ಆದರ್ಶ್ ಶಾಸ್ತ್ರಿ
- ಅಲ್ಕಾ ಲಾಂಬಾ
- ಸಂಜೀವ್ ಝಾ
- ಕೈಲಾಶ್ ಗೆಹ್ಲೋಟ್
- ವಿಜೇಂದ್ರ ಗಾರ್ಗ್
- ಪ್ರವೀಣ್ ಕುಮಾರ್
- ಶರದ್ ಕುಮಾರ್ ಚೌಹಾಣ್
- ಮದನ್ ಲಾಲ್
- ಶಿವಚರಣ್ ಗೋಯಲ್
- ಸರಿತಾ ಸಿಂಗ್
- ನರೇಶ್ ಯಾದವ್
- ರಾಜೇಶ್ ಗುಪ್ತಾ
- ಅನಿಲ್ ಕುಮಾರ್ ಬಾಜ್ಪೈ
- ರಾಜೇಶ್ ರಿಷಿ
- ಸೋಮ್ ದತ್
- ಅವತಾರ್ ಸಿಂಗ್
- ಸುಖವೀರ್ ಸಿಂಗ್
- ಮನೋಜ್ ಕುಮಾರ್
- ನಿತಿನ್ ತ್ಯಾಗಿ
- ಜರ್ನೈಲ್ ಸಿಂಗ್
Leave A Reply