ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬಕ್ಕೆ 414 ಕೋಟಿ ರುಪಾಯಿ ದಂಡ!
ದೆಹಲಿ: ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಮಧ್ಯೆಯೇ ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕುತ್ತಾಗುವ ಎಲ್ಲ ಲಕ್ಷಣ ಗೋಚರಿಸಿವೆ.
ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಒಡೆತನದ ಯಂಗ್ ಇಂಡಿಯನ್ ಕಂಪನಿಗೆ ಆದಾಯ ತೆರಿಗೆ ಇಲಾಖೆ 414 ಕೋಟಿ ರು. ದಂಡ ವಿಧಿಸಿದೆ ಎಂದು ಬಿಜೆಪಿ ಸಂಸದ, ಮುಖಂಡ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈ ಕೋರ್ಟ್ ಗೆ ತಿಳಿಸಿದ್ದು, ಸಂಚಲನ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಂಬಿಕಾ ಸಿಂಗ್ ಎದುರು ಹಾಜರಾದ ಸುಬ್ರಮಣಿಯನ್ ಸ್ವಾಮಿ, ಸೋನಿಯಾ, ರಾಹುಲ್ ಗಾಂಧಿ ಹಾಗೂ ಕಂಪನಿಯ ನಾಲ್ವರ ವಿರುದ್ಧ ನಾನು ನೀಡಿದ ದೂರಿನಂತೆ ಐಟಿ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ವಿವರಿಸಿದರು.
ಐಟಿ ಇಲಾಖೆ ತನಿಖೆ ನಡೆಸುತ್ತಿರುವ ಹಾಗೂ ದಂಡ ವಿಧಿಸಿರುವ ಕುರಿತು ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ದಾಖಲೆ ಪಡೆದ ಮ್ಯಾಜಿಸ್ಟ್ರೇಟ್ ಅಂಬಿಕಾ ಸಿಂಗ್, ನ್ಯಾಯಾಲಯದ ಮುಂದಿನ ಆದೇಶದವರೆಗೂ ಸೀಲ್ ಹಾಕಿದ ಲಕೋಟೆಯಲ್ಲಿ ಇಡುವಂತೆ ಸೂಚಿಸಿದರು.
ಜವಾಹರ್ ಲಾಲ್ ನೆಹರೂ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭಿಸಿದ್ದು, ಗಾಂಧಿ ಕುಟುಂಬದವರು ಪತ್ರಿಕೆಗಾಗಿ ಸರ್ಕಾರದ ಹಣ ಬಳಸಿದ್ದಾರೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ ದೂರು ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ಐಟಿ ಇಲಾಖೆ ಅಧಿಕಾರಿಗಳು 414 ಕೋಟಿ ರುಪಾಯಿ ದಂಡ ವಿಧಿಸಿದ್ದೇ ನಿಜವಾಗಿದ್ದರೆ, ದೇಶದಲ್ಲಿ ಕಾಂಗ್ರೆಸ್ಸಿನ ಈ ಇಬ್ಬರು ನಾಯಕರ ಹೆಸರು ಹಾಳಾಗುವುದರಲ್ಲಿ ಎರಡು ಮಾತಿಲ್ಲ.
Leave A Reply