ತ್ರಿವಳಿ ತಲಾಖ್ ಬೆಂಬಲಿಸುವವರೇ, ಗರ್ಭಿಣಿಗೆ ತ್ರಿವಳಿ ತಲಾಖ್ ನೀಡಿದ್ದನ್ನು ಏನಂತೀರಿ?
ಲಖನೌ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಮಸೂದೆ ಮಂಡಿಸಿದಾಗ ಅಸಾದುದ್ದೀನ್ ಓವೈಸಿಯಂಥ ಕೆಲ ನಾಯಕರು ಹಾಗೂ ಕೆಲ ಮುಸ್ಲಿಂ ಮುಖಂಡರು ಇದು ಷರಿಯಾ ವಿರುದ್ಧದ ಕಾನೂನು, ಮುಸ್ಲಿಮರ ಭಾವನೆಗಳ ವಿರುದ್ಧ ಜಾರಿಗೆ ತಂದ ಕಾನೂನು ಎಂದೆಲ್ಲ ಬೊಬ್ಬೆ ಹಾಕಿದರು.
ಆದರೂ ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಿ ಶೋಷಣೆ ಮಾಡುತ್ತಿರುವುದು ಮುಂದುವರಿದಿದ್ದು, ದುರದೃಷ್ಟವಶಾತ್ ಅವರ ಪರ ನಿಲ್ಲಲು ಯಾವ ಮುಸ್ಲಿಮರು, ಮಹಿಳಾ ಹೋರಾಟಗಾರರು, ಬುದ್ಧಿ ಜೀವಿಗಳು ಮುಂದೆ ಬರದಿರುವುದು ಬೇಸರದ ಸಂಗತಿಯಾಗಿದೆ.
ಹೌದು, ಉತ್ತರ ಪ್ರದೇಶದ ಮೊರಾದಾಬದ್ ನಲ್ಲಿ ಮುಸ್ಲಿಂ ಗರ್ಭಿಣಿಯೊಬ್ಬರಿಗೆ ವರದಕ್ಷಿಣೆ ಕಾರಣಕ್ಕಾಗಿ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ.
ಎಂಟು ತಿಂಗಳ ಹಿಂದೆ ಜೆಬಾ ಕಹ್ತುನ್ ಎಂಬ ಮಹಿಳೆ ಸೊಹೈಬ್ ಎಂಬಾತನನ್ನು ಮದುವೆಯಾಗಿದ್ದು, ಪ್ರಸ್ತುತ ಗರ್ಭಿಣಿಯಾಗಿದ್ದಾರೆ. ಆದರೆ ತಂದೆಯಾದೆ ಎನ್ನುವ ಖುಷಿ ಮರೆತ ಸೊಹೈಬ್ “ತವರು ಮನೆಯಿಂದ ಹೊಸ ಬೈಕ್ ತೆಗೆದುಕೊಂಡು ಬಾ ಎಂದು ಒತ್ತಾಯಿಸಿದ್ದಾನೆ. ತರಲು ಒಪ್ಪದ ಕಾರಣ ಕುಡಿದು ಮೊಬೈಲಿನಲ್ಲಿ ತ್ರಿವಳಿ ತಲಾಖ್ ನೀಡಿದ್ದಾನೆ” ಎಂದು ಮಹಿಳೆ ಆರೋಪಿಸಿದ್ದಾರೆ.
ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕಾಗಿ ತಲಾಖ್ ನೀಡಿದ್ದಾಗಿ ಮಹಿಳೆ ನೀಡಿದ ದೂರಿನ ಅನ್ವಯ ಸೊಹೈಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಎಸ್ಪಿ ರಾಯಿಸ್ ಅಖ್ತರ್ ಮಾಹಿತಿ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಕಳೆದ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಲು ಲೋಕಸಭೆಯಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಯಾದರೆ, ತಲಾಖ್ ನೀಡುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
Leave A Reply