ದಕ್ಷಿಣ ಕನ್ನಡ ಎಸ್ಪಿ ಸುಧೀರ್ ವರ್ಗಾವಣೆ, ಸಿಎಂ ಸಾಹೇಬ್ರೇ ದಕ್ಷ ಅಧಿಕಾರಿಗಳು ಬೇಡವೇ ನಿಮಗೆ?
ಮಂಗಳೂರು: ಸಿ.ಶಿಖಾ, ಅನುಪಮಾ ಶೆಣೈ, ಎಂ.ಕೆ.ಗಣಪತಿ ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರದ ಮನೋಭಾವನೆ ಜನರಿಗೆ ಗೊತ್ತಾಗಿದ್ದು ಹಳೇ ವಿಷಯ. ಈಗ ಅಂಥಾದ್ದೇ ಪ್ರಕರಣದಲ್ಲಿ ಮತ್ತೆ ರಾಜ್ಯ ಸರ್ಕಾರದ ದಕ್ಷ ಅಧಿಕಾರಿಗಳ ಮೇಲೆ ಕೆಂಗಣ್ಣು ಬೀರಿರುವುದು ಬಹಿರಂಗವಾಗಿದೆ.
ಹೌದು, ದಕ್ಷಿಣ ಕನ್ನಡದ ಎಸ್ಪಿಯಾಗಿ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಸುಧೀರ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ನೂತನ ಎಸ್ಪಿಯಾಗಿ ಬೆಳಗಾವಿ ಎಸ್ಪಿ ಡಾ.ರವಿಕಾಂತೇಗೌಡ ಅವರನ್ನು ಶೀಘ್ರವೇ ನೇಮಿಸಲಾಗಿದೆ.
ಇದೆಲ್ಲ ಏನನ್ನು ತೋರಿಸುತ್ತದೆ. ಯಾವುದೇ ಒಬ್ಬ ಎಸ್ಪಿ ಬೇರೆ ಜಿಲ್ಲೆಗೆ ವರ್ಗಾವಣೆಯಾದರೆ ಅಲ್ಲಿನ ಪರಿಸ್ಥಿತಿ ಅರಿತು ಶಾಂತಿ-ಸುವ್ಯವಸ್ಥೆ ಕಾಪಾಡಲು ಸಮಯ ಬೇಕಾಗುತ್ತದೆ. ಮೊದಲೇ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಏನು ಮಾಡಲು ಹೊರಟಿದೆ ಎಂದು ದಕ್ಷಿಣ ಕನ್ನಡದ ಜನ ಪ್ರಶ್ನಿಸುತ್ತಿದ್ದಾರೆ.
ಬಂಟ್ವಾಳದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣ ಭೇದಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾದ್ಯಂತ ದಕ್ಷ ಅಧಿಕಾರಿ ಎಂಬ ಹೆಸರು ಗಳಿಸಿದ್ದರು. ಅಷ್ಟೇ ಅಲ್ಲದೆ ಹಲವು ಪ್ರಕರಣ, ರೌಡಿಸಂ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದರು. ಹೀಗಿದ್ದರೂ ಭೂಷಣ ರಾವ್ ಬೊರಸೆ ಅವರಂತೆ ಮತ್ತೊಬ್ಬ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ದಕ್ಷ ಅಧಿಕಾರಿಗಳು ತಮಗೆ ಬೇಡ ಎಂಬ ಸಂದೇಶ ರವಾನಿಸಿದ್ದು ಸರಿಯಲ್ಲ ಎಂಬ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಇದರ ಹಿಂದೆ ರಾಜಕಾರಣಿಗಳ ಕೈವಾಡ ಸಹ ಇದೆ ಎಂಬ ಆರೋಪಗಳಿವೆ.
Leave A Reply