ರಾಷ್ಟ್ರಪತಿ ಒಪ್ಪಿಗೆಗೆ ಮಣಿದ ಆಪ್ ಶಾಸಕರು, ದೆಹಲಿ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿ ಹಿಂಪಡೆತ
ದೆಹಲಿ: ಲಾಭದಾಯಕ ಹುದ್ದೆ ಹೊಂದಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಲು ಚುನಾವಣೆ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ ಬೆನ್ನಲ್ಲೇ ಅನರ್ಹಗೊಂಡ ಶಾಸಕರು ಮೆತ್ತಗಾಗಿದ್ದಾರೆ.
ರಾಷ್ಟ್ರಪತಿ ಅವರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಶಿಫಾರಸು ಪ್ರಶ್ನಿಸಿ ದೆಹಲಿಗೆ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯನ್ನು ಹಿಂಪಡೆದಿದ್ದಾರೆ.
ಆಮ್ ಆದ್ಮಿಪಕ್ಷದ ಶಾಸಕರು ಸಂಸದೀಯ ಕಾರ್ಯದರ್ಶಿ ಎಂಬ ಲಾಭದಾಯಕ ಹುದ್ದೆಯಲ್ಲಿದ್ದು, ಹಲವು ಸೌಲಭ್ಯ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಪ್ ನ 20 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು.
ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಆಪ್ ನ 6 ಶಾಸಕರು ಕಳೆದ ಶುಕ್ರವಾರವೇ ಚುನಾವಣೆ ಆಯೋಗದ ತೀರ್ಮಾನಕ್ಕೆ ಕೂಡಲೇ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಚುನಾವಣೆ ಆಯೋಗ ಸೋಮವಾರ ವಿಚಾರಣೆ ಆರಂಭಿಸುವುದಾಗಿ ತಿಳಿಸಿತ್ತು.
ಆದರೆ ಭಾನುವಾರವೇ ರಾಷ್ಟ್ರಪತಿಯವರು ಆಪ್ ಶಾಸಕರ ಅನರ್ಹಗೊಳಿಸುವ ಶಿಫಾರಸಿಗೆ ಅಂಕಿತ ಹಾಕಿದ್ದಾರೆ. ಹಾಗಾಗಿ ನಾವು ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿಗಳ ಆದೇಶ ವಿರುದ್ಧವಾಗಿ ಬದಲಾಗುವುದರಿಂದ ಮನವಿ ಹಿಂಪಡೆಯಲಾಗಿದೆ ಎಂದು ಅನರ್ಹಗೊಂಡಿರುವ ಶಾಸಕರೊಬ್ಬರು ಮಾಹಿತಿ ನೀಡಿದ್ದಾರೆ.
ಆದಾಗ್ಯೂ ಆಮ್ ಆದ್ಮಿ ಪಕ್ಷವು ಚುನಾವಣೆ ಆಯೋಗದ ಪ್ರಕ್ರಿಯೆ, ವಿಚಾರಣೆ ವಿಧಾನದ ಉಸ್ತುವಾರಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಮಾರ್ಚ್ 20ರಂದು ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್ ತಿಳಿಸಿದೆ.
Leave A Reply