ಮಾನ-ಮರ್ಯಾದೆ ಇಲ್ಲದ ಸಿಎಂ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದು ದೇವೇಗೌಡರು ಹೇಳಿದ್ದೇಕೆ?
ಬೆಂಗಳೂರು: ರಾಜ್ಯದ ದಕ್ಷ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ಗರಂ ಆಗಿದ್ದಾರೆ.
ಅದರಲ್ಲೂ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಆದೇಶ ನೀಡಿದ್ದರಿಂದ (ಈಗ ವಾಪಸ್ ಪಡೆಯಲಾಗಿದೆ) ಕುಪಿತರಾದ ಗೌಡರು, “ಮಾನ ಮರ್ಯಾದೆಯಿಲ್ಲದೆ ಸಿದ್ದರಾಮಯ್ಯ ಅವರ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಶಾಂತಿಯುತವಾಗಿ ನಡೆಯಲಿ ಎಂಬ ದೃಷ್ಟಿಯಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬೇಡಿ ಎಂದು ಮನವಿ ಮಾಡಿದರೂ, ವರ್ಗಾವಣೆಗೊಳಿಸಿದ್ದ ಸರ್ಕಾರದ ಕ್ರಮಕ್ಕೆ ದೇವೇಗೌಡರು ಸಿಟ್ಟಾಗಿದ್ದಾರೆ.
ಇಂತಹ ಕೆಟ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಮಹಮಸ್ತಕಾಭಿಷೇಕಕ್ಕೆ ರಕ್ಷಣೆ ಬೇಕು ಎಂಬ ಕಾರಣಕ್ಕೆ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬೇಡಿ ಎಂದು ಮನವಿ ಮಾಡಿದ್ದೆ. ಆದರೆ ಗೃಹ ಇಲಾಖೆ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಂಥ ಸಿದ್ದರಾಮಯ್ಯನವರು ಇನ್ನು ಮುಂದೆ ಕೂತುಕೊಳ್ಳುವ ಸರ್ಕಾರಿ ಕಾರ್ಯಕ್ರಮದ ಯಾವುದೇ ವೇದಿಕೆಯನ್ನು ನಾನು ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಫೆ.7ರಂದು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಮಿಸಲಿದ್ದು, ಅವರಿಗೆ ನಾನು ಗೌರವ ಸಲ್ಲಿಸಬೇಕಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವುದರಿಂದ ನಾನು ಕಾರ್ಯಕ್ರಮ ಬಹಿಷ್ಕರಿಸಿದ್ದೇನೆ ಎಂದು ವಿವರಿಸಿದ್ದಾರೆ.
ಇದನ್ನು ಯಾರಾದರೂ ಸರ್ಕಾರ ಎಂದು ಕರೆಯಲು ಸಾಧ್ಯವಾಗುತ್ತದೆಯೇ? ಈ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದ್ದು, ಅವರೇ ರಕ್ಷಣಾ ಕಾರ್ಯದರ್ಶಿಗೆ ಭದ್ರತೆ ಒದಗಿಸಿ ಎಂದು ಮನವಿ ನೀಡುವಂತಾಗಿದೆ. ಕೆಂಪಯ್ಯ ಅಧೀನದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ದೇವೇಗೌಡರು ತಿಳಿಸಿದ್ದಾರೆ.
ವರ್ಗಾವಣೆ ಆದೇಶ ಹೊರಬೀಳುತ್ತಲೇ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮುಖ್ಯಮಂತ್ರಿಯವರು ಐವರು ಅಧಿಕಾರಿಗಳ ವರ್ಗಾವಣೆ ಆದೇಶ ಹಿಂಪಡೆದಿದ್ದಾರೆ. ಆದರೂ ಸರ್ಕಾರಕ್ಕೆ ಇದರಿಂದ ಮುಖಭಂಗವಾಗಿದೆ.
Leave A Reply