ಯೋಗಿ ಆದಿತ್ಯನಾಥರು ಜಾರಿಗೊಳಿಸಿದ ಆ್ಯಂಟಿ ರೋಮಿಯೋ ಸ್ಕ್ವಾಡ್ ಹೇಗೆ ಕಾರ್ಯ ಮಾಡಿದೆ ಗೊತ್ತಾ?
ಲಖನೌ: ಉತ್ತರ ಪ್ರದೇಶದಲ್ಲಿ ಒಂಬತ್ತು ತಿಂಗಳ ಹಿಂದೆ ಯೋಗಿ ಆದಿತ್ಯನಾಥರು ಅಧಿಕಾರ ವಹಿಸಿಕೊಳ್ಳುತ್ತಲೇ ರಾಜ್ಯದಲ್ಲಿ ನೈತಿಕಗಿರಿ ಕಾಪಾಡಲು ಮುಂದಾಗಿ, ಆ್ಯಂಟಿ ರೋಮಿಯೋ ಸ್ಕ್ವಾಡ್ ಎಂಬ ತಂಡ ರಚಿಸಿದ್ದರು. ಆಗ ಎಲ್ಲರೂ ಯೋಜನೆಗೆ ಗೇಲಿ, ವಿರೋಧ ಮಾಡಿದ್ದರು. ಆದರೆ ಈಗ ಈ ಸ್ಕ್ವಾಡ್ ಉತ್ತಮವಾಗಿ ಕೆಲಸ ಮಾಡಿದೆ.
ಹೌದು, ಕಳೆದ ಒಂಬತ್ತು ತಿಂಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್, ಪ್ರತಿದಿನ ಆರರಂತೆ ಬರೋಬ್ಬರಿ 1706 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವ, ದೈಹಿಕವಾಗಿ ಅಸಭ್ಯ ತೋರಿಸುವವರಿಗೆ ಬಿಸಿ ಮುಟ್ಟಿಸಲಾಗಿದೆ.
2017ರ ಮಾರ್ಚ್ 15ರಿಂದ ಡಿಸೆಂಬರ್ ವರೆಗೆ ಇಷ್ಟು ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿ ನೈತಿಕಗಿರಿತನ ಕಾಪಾಡಲಾಗಿದೆ ಎಂದು ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಂದ ಮಾಹಿತಿ ಕೋರಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಅನುಚಿತವಾಗಿ ವರ್ತಿಸಿದ 9.33 ಲಕ್ಷ ಜನರಿಗೆ ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಸುಮಾರು 21 ಲಕ್ಷ ಜನರನ್ನು ಈ ಕುರಿತು ವಿಚಾರಣೆ ನಡೆಸಲಾಗಿದೆ. ಇದಕ್ಕಾಗಿ 7.97 ಲಕ್ಷ ಬಾರಿ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಅನುಚಿತವಾಗಿ ವರ್ತಿಸಿದ 1706 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಂದಿದೆ.
ಅಲ್ಲದೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ಹಿನ್ನೆಲೆಯಲ್ಲಿ 3003 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜನವರಿ 26ರಂದು ನಡೆಯುವ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ತಿಳಿಸುವ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಯೋಗಿ ಆದಿತ್ಯನಾಥರು ಜಾರಿಗೊಳಿಸಿದ ಹಲವು ಯೋಜನೆಗಳಲ್ಲಿ ಈ ಯೋಜನೆ ಉತ್ತಮ ಯಶಸ್ಸು ಸಾಧಿಸಿದೆ ಎಂದೇ ಹೇಳಲಾಗುತ್ತಿದೆ.
Leave A Reply