ಕೇರಳ ಸರ್ಕಾರದ ಉದ್ದಟತನ, ಭಾಗವತ್ ಧ್ವಜಾರೋಹಣಕ್ಕೆ ಅವಕಾಶ ಬೇಡ ಎಂದು ಪರೋಕ್ಷ ಆದೇಶ
ತಿರುವನಂತಪುರ: ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕಮ್ಯುನಿಸ್ಟ್ ಪಕ್ಷದ ಜನರು ಒಂದೆಡೆಯಾದರೆ, ಕೇರಳ ಸರ್ಕಾರವೂ ತನ್ನ ಹಿಂದೂ ವಿರೋಧಿ ನೀತಿಯನ್ನು ಮುಂದುವರಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜನವರಿ 26 ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ತಿಳಿದ ಸರ್ಕಾರ, ರಾಜ್ಯದ ಎಲ್ಲ ಶಾಲೆ, ಕಾಲೇಜು ಆಡಳಿತ ಮಂಡಳಿಗಳಿಗೆ ವಿಚಿತ್ರವಾದ ಆದೇಶ ಹೊರಡಿಸಿದೆ. ಈ ಮೂಲಕ ಮೋಹನ್ ಭಾಗವತ್ ಧ್ವಜಾರೋಹಣ ತಡೆಯುವ ಹಿಂಬಾಗಿಲ ತಂತ್ರ ಕೇರಳ ಸರ್ಕಾರ ಮಾಡಿದ್ದು, ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೆ ಕೇರಳದ ಶಾಲೆಯೊಂದರಲ್ಲಿ ಆಗಸ್ಟ್ 15ರಂದು ಮೋಹನ್ ಭಾಗವತ್ ಧ್ವಜಾರೋಹಣ ಮಾಡಿದ್ದರಿಂದ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಜನವರಿ 15ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಲಿರುವ ಮೋಹನ್ ಭಾಗವತ್ ಧ್ವಜಾರೋಹಣ ಮಾಡುವುದು ನಿಗದಿಯಾಗಿತ್ತು. ಅವರನ್ನು ಗುರಿಯಾಗಿಟ್ಟುಕೊಂಡು ಕೇರಳ ಸರ್ಕಾರ ಹೊಸ ಆದೇಶ ಹೊರಡಿಸಿ, ಭಾಗವತ್ ಧ್ವಜಾರೋಹಣ ತಡೆಯುವ ಹುನ್ನಾರ ನಡೆಸಿದೆ.
ಜ.26ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇರಳದ ಪಲಕ್ಕಡಕ್ಕೆ ಮೋಹನ್ ಭಾಗವತ್ ಆಗಮಿಸುತ್ತಿದ್ದು, ಆ ವೇಳೆ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು.
ಏನಿದೆ ಆದೇಶದಲ್ಲಿ
ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಮಾತ್ರ ಧ್ವಜಾರೋಹಣ ಮಾಡಬೇಕು. ಶಾಲಾ, ಕಾಲೇಜುಗಳಲ್ಲಿ ಆಯಾ ವಿಭಾಗದ ಮುಖ್ಯಸ್ಥರು, ಸಂಸ್ಥೆಯ ಅಧಿಕೃತ ವ್ಯಕ್ತಿಗಳು, ಕಚೇರಿಯ ಸಿಬ್ಬಂದಿ ಮಾತ್ರ ಧ್ವಜಾರೋಹಣ ಮಾಡಬೇಕು. ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಆಯಾ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಧ್ವಜಾರೋಹಣ ಮಾಡಬೇಕು.
ಹೀಗೆ ಪರೋಕ್ಷವಾಗಿ ಭಾಗವತ್ ಧ್ವಜಾರೋಹಣಕ್ಕೆ ಅವಕಾಶ ತಪ್ಪಿಸಲು ಕೇರಳ ಸರ್ಕಾರ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಮೋಹನ್ ಭಾಗವತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇರಳ ಸರ್ಕಾರ ದುರುದ್ದೇಶಪೂರ್ವಕವಾಗಿ ಇಂತಹ ಆದೇಶಗಳನ್ನು ಹೊರಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
Leave A Reply