ಯಶಸ್ವಿಯಾಗಲಿಲ್ಲ ಕೃತಕ ಬಂದ್, ಉತ್ತರ ಕರ್ನಾಟಕದಲ್ಲೇ ಇಲ್ಲ ಬೆಂಬಲ
ಬೆಂಗಳೂರು: ಮಹದಾಯಿ ವಿಚಾರವಾಗಿ ರಾಜಕೀಯ ಪ್ರೇರಿತವಾಗಿ ಕರೆ ನೀಡಿದ್ದ ಕರ್ನಾಟಕ ಬಂದ್ ಎಂಬ ಕೃತಕ ನಾಟಕಕ್ಕೆ ರಾಜ್ಯದ ಜನ ಬೆಂಬಲ ನೀಡಿಲ್ಲ. ಇದರಿಂದ ಸರ್ಕಾರದ ಮಾತು ಕೇಳಿದ್ದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಬಿಜೆಪಿ ಪರಿವರ್ತನಾ ರ್ಯಾಲಿ ಹಿನ್ನೆಲೆಯಲ್ಲಿ ಜನವರಿ 27ರಂದು ನಿಗದಿಯಾಗಿದ್ದ ಕರ್ನಾಟಕ ಬಂದ್ಅನ್ನು ಜನವರಿ 25ರಂದೇ ಮಾಡಲು ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿನ್ನಡೆಯಾದಂತಾಗಿದೆ.
ರಾಜ್ಯದ ಬಹುತೇಕ ಕಡೆ ಮಹದಾಯಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಸುಗಮವಾಗಿ ಸಾಗುತ್ತಿದೆ. ಉತ್ತರ ಮಹದಾಯಿ ನದಿ ನೀರಿನ ಪ್ರಮುಖ ಫಲಾನುಭವಿಗಳಾದ ಉತ್ತರ ಕರ್ನಾಟಕದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಹಾವೇರಿ, ಕೊಪ್ಪಳ, ವಿಜಯಪುರದಲ್ಲಂತೂ ಬಂದ್ ಬಿಸಿ ತಟ್ಟದೆ, ವ್ಯಾಪಾರ ವಹಿವಾಟು ಸುಗಮವಾಗಿ ಸಾಗುತ್ತಿದೆ. ಅಂಗಡಿಮುಂಗಟ್ಟು ತೆರೆದಿದ್ದು, ಜನ ಎಂದಿನಂತೆ ತಿರುಗಾಡುತ್ತಿದ್ದಾರೆ. ಸರ್ಕಾರದ ಮಾತು ಕೇಳಿದ ತಪ್ಪಿಗೆ ಹಲವು ಕನ್ನಡಪರ ಸಂಘಟನೆಗಳು ಮಾತ್ರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿರುವುದು ಬಿಟ್ಟರೆ ಇನ್ನಾವುದೇ ತೊಂದರೆಯಾಗಿಲ್ಲ.
ಇದು ಉತ್ತರ ಕರ್ನಾಟಕದ ಪರಿಸ್ಥಿತಿಯಾದರೆ, ಬೇರೆ ಭಾಗದಲ್ಲೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡದ ಶಿರಸಿ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಕೊಡಗು ಜಿಲ್ಲೆಗಳಲ್ಲೂ ಬಂದ್ ಗೆ ಅತೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರದ ಆಣತಿ ಮೇರೆಗೆ ಬಂದ್ ಗೆ ಕೆಎಸ್ಆರ್ಟಿಸಿ ಬೆಂಬಲ ನೀಡಿರುವುದರಿಂದ ಬೆಂಗಳೂರು ಸುತ್ತಲೂ ಬಸ್ ಸಂಚಾರ ಅಸ್ತವ್ಯಸ್ತವಾಗಿದ್ದು ಬಿಟ್ಟರೆ ಅಷ್ಟೇನೂ ಪ್ರಭಾವ ಬೀರಿಲ್ಲ.
ಒಟ್ಟಿನಲ್ಲಿ ಸರ್ಕಾರದ ರಾಜಕೀಯ ಪ್ರೇರಿತ ಮಾತು ಕೇಳಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Leave A Reply