ಎಸ್ಪಿ ಸುಧೀರ್ ರೆಡ್ಡಿ ವರ್ಗ ಮಾಡಿಸಿ ಬೀಗಿದ್ದ ಕಾಂಗ್ರೆಸಿಗರು , ಮೂಡ ಕಮಿಷನರ್ ವರ್ಗಕ್ಕೆ ಕೈ ಹಾಕಿ ಮೂಢರಾದರು!
ಶ್ರೀಕಾಂತ ರಾವ್ ವರ್ಗ ರದ್ದು: ಕಾಂಗ್ರೆಸಿಗರ ಕೈ ಕಟ್ ಬಾಯ್ ಮುಚ್ಚು !
ದಕ್ಷ ಅಧಿಕಾರಿ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಗೊಳಿಸಿ ಬೀಗಿದ್ದ ಜಿಲ್ಲೆಯ ಕಾಂಗ್ರೆಸ್ ಲಾಭಿ ಕೋರರು, ಮೂಡಾ ಕಮಿಷನರ್ ಶ್ರೀಕಾಂತ್ ರಾವ್ ಅವರನ್ನು ಬಲವಂತವಾಗಿ ವರ್ಗಾಯಿಸಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ !
ಲೇಟೆಸ್ಟ್ ವಿಚಾರ ಅಂದರೆ ಮೇಯರ್ ಕವಿತಾ ಸನಿಲ್, ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಕಾರ್ಪೊರೇಟರ್‍ಗಳ ಬೆಂಬಲ ಪಡೆದ ಕಾಂಗ್ರೆಸಿನ ಒಂದು ಬಣ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಶ್ರೀಕಾಂತ ರಾವ್ ಅವರನ್ನು ವರ್ಗ ಮಾಡಲೇ ಪಣ ತೊಟ್ಟಿದ್ದರು. ಇದಕ್ಕಿಂತ ಮುಂಚಿತವಾಗಿ ಉಸ್ತುವಾರಿ ಸಚಿವ ರಮಾನಾಥ ರೈಗಳೇ ವರ್ಗಾವಣೆಗೆ ಶಿಫಾರಸು ಪತ್ರ ಬರೆದಿದ್ದರು.
ಇಷ್ಟೆಲ್ಲಾ ಆದರೂ ಶ್ರೀಕಾಂತ ರಾವ್ ವರ್ಗಾವಣೆ ಸುಲಭದ ತುತ್ತಾಗಿರಲಿಲ್ಲ. ಏಕೆಂದರೆ ಇವರ ಹಿಂದೆ ಇದ್ದದ್ದು ಆಡಳಿತ ಪಕ್ಷ ಮುಖ್ಯಸಚೇತಕ ಐವನ್ ಡಿಸೋಜ ಅವರ ಬಲಿಷ್ಟ ಕೈ.
ಹಾಗೆ ನೋಡಿದರೆ ಶ್ರೀಕಾಂತ ರಾವ್ ಕಾಂಗ್ರೆಸಿಗರಲ್ಲ. ರಾಷ್ಟ್ರೀಯವಾದದ ಒಲವು ಉಳ್ಳವರು. ಆದರೆ ಐವನ್ ಡಿಸೋಜ ಮತ್ತು ಕಾಂಗ್ರೆಸ್ ಬಳಗದ ಕೆಲವರು ಶ್ರೀಕಾಂತ್ ರಾವ್ ಅವರ ಕಾನೂನು ಕಾಲೇಜಿನ ಸಹಪಾಠಿಗಳು, ಗೆಳೆಯರು.
ಹೀಗಾಗಿ ಉಸ್ತುವಾರಿ ಸಚಿವರ ಶಿಫಾರಸು ಪತ್ರವನ್ನು ಐವನ್ ಡಿಸೋಜ ಅವರು ತಮ್ಮ ಮುಖ್ಯಮಂತ್ರಿಗಳ ಜತೆ ಇರುವ ಸಂಪರ್ಕದಿಂದಾಗಿ ಬದಿಗಿರಿಸುವಂತೆ ಮಾಡಿದ್ದರು.
ಶಾಸಕ ಲೋಬೊ ಅವರಿಗೂ ಶ್ರೀಕಾಂತ ರಾವ್ ಮೇಲೆ ಕೆಂಡದಂಥ ಕೋಪ ಇತ್ತು. ಆದರೆ ಅವರಿಗೆ ರಕ್ಷೆಯಾಗಿರುವುದು ತಮ್ಮದೇ ಪಕ್ಷದ ಐವನ್ ಡಿಸೋಜ. ಹೀಗಾಗಿ ಒಳಗೊಳಗೆ ಕುದಿಯುತ್ತಿದ್ದರೂ ಏನೂ ಮಾಡಲಾಗದೆ ಸುಮ್ಮನಿದ್ದರು. ಒಮ್ಮೆ ವರ್ಗ ಮಾಡಲು ಹೋದಾಗ ಐವನ್ ಡಿಸೋಜ ಬೆಂಗಳೂರಿಗೆ ಹೋಗಿ ಅಧಿಕಾರಿಗಳ ಮುಂದೆ ಗರ್ಜಿಸಿದ್ದು ಲೋಬೊ ಅವರಿಗೆ ಮಾಹಿತಿ ಸಿಕ್ಕಿತ್ತು.
ಮೇಯರ್ ಕವಿತಾ ಸನಿಲ್ಗ್ ಗೂ ತಾವು ಹೇಳಿದಂತೆ ಕೇಳುತ್ತಿಲ್ಲ ಎಂಬ ಕಾರಣಕ್ಕೆ ಮೂಡಾ ಕಮಿಷನರ್ ಮೇಲೆ ಆಕ್ರೋಶ ಇತ್ತು. ದಕ್ಷ, ನೇರ ನಡೆನುಡಿಯ ಕಮಿಷನರ್ ಕಾರ್ಯ ವೈಖರಿಯಿಂದ ಕೆಲವು ಕಾರ್ಪೊರೇಟರ್‍ಗಳಿಗೂ ಅಸಮಾಧಾನ ಇತ್ತು.
ಒಬ್ಬೊಬ್ಬರೇ ದೂರು ನೀಡಿ ವರ್ಗಾವಣೆ ಮಾಡುವುದಕ್ಕಿಂತ ಎಲ್ಲರೂ ಸೇರಿ ವರ್ಗಾಯಿಸೋಣ ಎಂದು ಎಲ್ಲರೂ ಒಟ್ಟು ಸೇರಿ ಮುಖ್ಯಮಂತ್ರಿ ಬಳಿ ದೂರಿದರು. ಕಳೆದ ಬಾರಿ ಮಹಾನಗರ ಪಾಲಿಕೆ ಜಂಟಿ ಕಮಿಷನರ್ ಆಗಿದ್ದ ವೇಳೆ ಮಂಗಳೂರು ದಕ್ಷಿಣದ ಚುನಾವಣಾಧಿಕಾರಿಯಾಗಿದ್ದ ಶ್ರೀಕಾಂತ ರಾವ್, ಶಾಸಕ ಜೆ.ಆರ್. ಲೋಬೊಗೆ ಸಂಬಂಧ ಪಟ್ಟ ಚುನಾವಣೆ ಅಕ್ರಮ ವ್ಯವಹಾರಗಳ ಮೇಲೆ ದಾಳಿ ಮಾಡಿಸಿದ್ದರು. ಈ ಬಾರಿಯೂ ಚುನಾವಣಾಧಿಕಾರಿಯಾದರೆ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ದಾಳಿ ಮಾಡಿಸಬಹುದು ಎಂಬ ಕಾರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಳಿ ಕಿವಿ ಊದಿದರು. ಅದೂ ಅಲ್ಲದೆ ಅಧಿಕಾರಿ ಜನಿವಾರಧಾರಿ ಎಂದು ಒಗ್ಗರಣೆ ಬೇರೆ ಹಾಕಿದರು.
ಕವಿತಾ ಸನಿಲ್ ಆದಿಯಾಗಿ ಕಾಂಗ್ರೆಸ್ ಜನಪ್ರತಿನಿಧಿಗಳು ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲೆದೂಗಲೇ ಬೇಕಾಯಿತು. ಐವನ್ ಡಿಸೋಜ ಅನಿವಾರ್ಯವಾಗಿ ಸೋಲೊಪ್ಪಿಕೊಳ್ಳಲೇಬೇಕಾಯಿತು. ಶ್ರೀಕಾಂತ ರಾವ್ ಅವರನ್ನು ಮೆಸ್ಕಾಂಗೆ ವರ್ಗಾಯಿಸಿ, ಕಾಂಗ್ರೆಸ್ ಬಣ ಗೆಲುವಿನ ನಗೆ ಬೀರಿತು.
ಆದರೆ ಶ್ರೀಕಾಂತ ರಾವ್ ಸೋಲೊಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಬಂದು ಎರಡು ವರ್ಷವೂ ಆಗಿಲ್ಲ. ಇಷ್ಟು ಬೇಗ ವರ್ಗ ಮಾಡಿಸಿ ಬಿಟ್ಟರಲ್ಲ ಎಂಬ ಆಕ್ರೋಶ ಹಠವಾಗಿ ಪರಿವರ್ತನೆಯಾಯಿತು.
ಈ ನಡುವೆ ಕಾಂಗ್ರೆಸಿಗರ ಬಣಗಳ ಜಗಳದಿಂದಾಗಿ ಹೊಸದಾಗಿ ಬಂದ ಷ ಕೂಡಾ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದರು, 2 ವಾರ ರಜೆ ಹಾಕಿದ್ದರಿಂದ ಮೂಡಾದ ಕೆಲಸ ಎಲ್ಲವೂ ಸ್ಥಗಿತವಾಗಿತ್ತು. ಜನರು ಗೋಳಾಟವೂ ಹೆಚ್ಚಾಗಿತ್ತು.
ಮಂಗಳೂರು ಎಸ್‍ಡಿಎಂ ಕಾನೂನು ಕಾಲೇಜಲ್ಲಿ ಕಲಿತು ರ್ಯಾಂಕ್ ಪಡೆದಿದ್ದ ಶ್ರೀಕಾಂತ ರಾವ್, ತಮ್ಮ ವಕೀಲ ಜಾಣ್ಮೆ ಪ್ರಯೋಗಿಸಿ ಕೆಎಟಿಯಲ್ಲಿ ದೂರು ನೀಡಿದರು. ಎರಡು ವರ್ಷಕ್ಕಿಂತ ಮುನ್ನ ವರ್ಗಾವಣೆ ಮಾಡಿದ್ದರಿಂದ ತಕ್ಷಣ ಮರು ನೇಮಕಕ್ಕೆ ಆದೇಶವೂ ಬಂತು. ಈಗ ಕೈ ಸುಟ್ಟುಕೊಂಡ ಕಾಂಗ್ರೆಸಿಗರು ಮುಖ ಮುಚ್ಚಿಕೊಳ್ಳುವಂತಾಗಿದೆ.
ಮಹಾನಗರ ಪಾಲಿಕೆ ಕಚೇರಿಯ ಪಡಸಾಲೆಯಲ್ಲಿ ಇದೇ ಸೋಲಿನ ವಿಚಾರದ ಕುರಿತು ಕಾರ್ಪೊರೇಟರ್‍ಗಳು ವಿಷಾದದಿಂದ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಸ್ವೀಕರಿಸಲಿರುವ ಶ್ರೀಕಾಂತ ರಾವ್ ಕಾರ್ಯ ವೈಖರಿ ಹೇಗಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಧಿಕಾರಿ ಪ್ರತಿಭಟನೆಯಾದರೆ ರಾಜ್ಯದ ಇತರೆಡೆ ಜನರಿಂದಲೇ ಪ್ರತಿಭಟನೆ, ಪ್ರತಿಪಕ್ಷಗಳ ಹೋರಾಟದಿಂದ ವರ್ಗಾವಣೆ ರದ್ದಾಗುತ್ತದೆ. ಆದರೆ ಕರಾವಳಿ ಜನರು ಹಿಂದೆ ತಮ್ಮಲ್ಲೇ ಗೊಣಗಿ ಸುಮ್ಮನಾಗುತ್ತಿದ್ದರು. ಆದರೆ ಈಗ ಫೇಸ್‍ಬುಕ್, ವಾಟ್ಸಪ್‍ಗಳಲಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ಹಂತ ತಲುಪಿದ್ದಾರೆ.
ವರ್ಗಾವಣೆ ತಡೆಗೆ ಜನರ ಪ್ರತಿಭಟನೆ ಕಾದು ಕುಳಿತರೆ ಸಾಧ್ಯವಾಗದು, ನಾವೇ ಪ್ರಯತ್ನ ಮಾಡಬೇಕು ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಂಡಿರುವುದು ಒಳ್ಳೆಯ ವಿಚಾರ.
ಹಿಂದೆಯೂ ಕಾಡಿದ್ದರು !
ಮಂಗಳೂರು ಪಾಲಿಕೆ ಕಮಿಷನರ್ ಆಗಿ ಹರೀಶ್ ಮತ್ತು ಜಂಟಿ ಕಮಿಷನರ್ ಆಗಿ ಶ್ರೀಕಾಂತ್ ಒಳ್ಳೆಯ ಹೆಸರು ಮಾಡಿದ್ದರು. ಅಕ್ರಮಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಆಗ ವಿನಯ ಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರು. ಶ್ರೀಕಾಂತ ರಾವ್ ಅವರನ್ನು ಜಂಟಿ ಆಯುಕ್ತರ ಹುದ್ದೆಯಿಂದ ಕೆಳಗಿಳಿಸಿ ನೇರವಾಗಿ ದಿಲ್ಲಿ ಕರ್ನಾಟಕ ಸಂಘಕ್ಕೆ ಕಳುಹಿಸಿದ್ದರು. ಅಂದು ಮರು ಮಾತನಾಡದೆ ಕೈ ಕಟ್, ಬಾಯ್ ಮುಚ್ಚು ಎಂದು ದಿಲ್ಲಿಗೆ ಹೋಗಿದ್ದರು, ಆದರೆ ಈ ಬಾರಿ ಮಾತ್ರ ಕೈ ಕಟ್ ಬಾಯಿ ಮುಚ್ಚು ಎಂದು ಕಾಂಗ್ರೆಸಿಗರಿಗೆ ತಿರುಮಂತ್ರ ಹೇಳಿದ್ದಾರೆ.
ದಕ್ಷ ಅಧಿಕಾರಿಗಳ ಮೇಲೆ ಕರಾಳ ಹಸ್ತ !
ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳ ವರ್ಗದ ಕುರಿತು ಹೇಳುವಾಗ ಸುಧೀರ್ ಕುಮಾರ್ ರೆಡ್ಡಿ ಅವರ ವಿಚಾರ ಹೇಳಲೇ ಬೇಕು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಸ್‍ಪಿ, ಕಮಿಷನರ್‍ಗಳನ್ನು ಬೇಕಾ ಬಿಟ್ಟಿ ವರ್ಗಾಯಿಸಲಾಗುತ್ತಿದೆ.
ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲೇಬೇಕು ಎಂದು ನಿರ್ಧರಿಸಿದ್ದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಲೋಡ್‍ಗಟ್ಟಲೆ ಮರಳುಗಳನ್ನು ಮುಟ್ಟುಗೋಲು ಹಾಕಿಕೊಂಡಾಗ ಬೇರೆ ದಾರಿ ಕಾಣದೆ ಅವರನ್ನು ವರ್ಗ ಮಾಡಿಸಬೇಕಾಯಿತು. ಯಾವುದೇ ಅಪರಾಧ ಕೃತ್ಯಗಳಲ್ಲಿ ಬಂಧನವಾದಾಗ ತಮಗೆ ಬೇಕಾದವರನ್ನು ಬಿಡಿಸಲು ಎಸ್ಪಿಯವರಲ್ಲಿ ಹೇಳಿದರೆ ಮತ್ತಷ್ಟು ಹೆಚ್ಚು ಸೆಕ್ಷನ್ ಹಾಕಿ ಬಂಧನ ಮತ್ತಷ್ಟು ಗಟ್ಟಿಯಾಗುತ್ತಿತ್ತು. ಯಾವುದೇ ಪಕ್ಷ, ಶಿಫಾರಸು ನೋಡದೆ ಬಂಧಿಸುವಂತೆ ಎಚ್ಚರಿಕೆ ಸಂದೇಶ ನೀಡಿದ್ದರು.
ಕಾನೂನು ಪಾಲಕರಿಗೆ ಸ್ನೇಹಿಯಾಗಿದ್ದ ಎಸ್‍ಪಿ, ಕಾನೂನು ಭಂಜಕರಿಗೆ ಸಿಂಹ ಸ್ವಪ್ನವಾಗಿದ್ದರು. ಹಿಂದಿನ ಎಸ್ಪಿ ಸಚಿವರಿಗೆ, ರಾಜಕೀಯ ಪಕ್ಷಗಳಿಗೆ ಗೌರವ ಆದರೂ ನೀಡುತ್ತಿದ್ದರು. ಆದರೆ ಕಲ್ಲಡ್ಕ ಭಟ್ಟರನ್ನು ಬಂಧಿಸುವಂತೆ ಸೂಚನೆ ನೀಡಿದ ವೀಡಿಯೊ ಬಹಿರಂಗವಾದ ಬಳಿಕ ಅವರನ್ನು ಅನಿವಾರ್ಯವಾಗಿ ವರ್ಗಾವಣೆ ಮಾಡಬೇಕಾಗಿತ್ತು. ಆದರೆ ಬಳಿಕ ಬಂದ ಸುಧೀರ್ ಕುಮಾರ್ ರೆಡ್ಡಿ ಯಿಂದಾಗಿ ರಾಜಕಾರಣಿಗಳ ಮಾತಿಗೆ ಮರ್ಯಾದೆಯೇ ಹೊರಟು ಹೋಗಿತ್ತು. ಆದ್ದರಿಂದ ಆರೇ ತಿಂಗಳಲ್ಲಿ ಗೇಟ್ ಪಾಸ್ ಸಿಕ್ಕಿತು.
ಪತ್ರಕರ್ತರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಪತ್ರಕರ್ತರಿಗೆ ಕ್ರಿಕೆಟ್ ಕೂಟ ಮಾಡಿಸಿದ್ದರು. ಅಂದು ಪೊಲೀಸರೊಬ್ಬರು ನಿರ್ಲಕ್ಷ್ಯ ತೋರಿದಾಗ ಸಂಶಯ ಬಂದು ಸರಾಯಿ ಕುಡಿದಿರುವ ಕುರಿತು ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಇನ್‍ಸ್ಪೆಕ್ಟರ್‍ಗೆ ಸೂಚಿಸಿದ್ದರು.
ದೇವಸ್ಥಾನಕ್ಕೆ ಹೋಗುವಾಗಿ ಸಾರಾಯಿ ಕುಡಿಯುತ್ತಾರಾ ? ನಮಗೂ ಪೊಲೀಸ್ ಕರ್ತವ್ಯ ಅಂದರೆ ದೇವಸ್ಥಾನ ಇದ್ದ ಹಾಗೆ, ಆಗ ಕುಡಿಯುವಂತಿಲ್ಲ ಎಂದು ಎಚ್ಚರಿಸಿದ್ದರು.
ಪತ್ರಕರ್ತನಿಗೂ ಡೋಂಟ್ ಕೇರ್
ಬೆಳ್ತಂಗಡಿಯಲ್ಲಿ ಮಾಜಿ ಪತ್ರಕರ್ತರೊಬ್ಬರು ಸರಕಾರಿ ಬಂಗ್ಲೆಯಲ್ಲಿ ಪೊಲೀಸರ ಜತೆ ಕುಡಿತ, ಮೋಜು ಮಸ್ತಿ ಮಾಡುತ್ತಿದ್ದ ವಿಚಾರ ತಿಳಿದು ಅಲ್ಲಿದ್ದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿಸಿದ್ದರು. ಲಾಬಿ ಮಾಡಲು ಬಂದ ಮಾಜಿ ಪತ್ರಕರ್ತನಿಗೆ ಒಳಗೆ ಬರಲೇ ಬಿಡದೆ ಕ್ಷಣ ಮಾತ್ರವೂ ಕಂಪೌಂಡ್ ಒಳಗೆ ಕಂಡರೆ ಇವನನ್ನೂ ಒದ್ದು ಒಳಗೆ ಹಾಕುತ್ತೇನೆ ಎಂದು ಪೊಲೀಸ್ ಬಳಿ ಗರ್ಜಿಸಿದ್ದರು. ಬಳಿಕ ಆತ ಜಾಗ ಖಾಲಿ ಮಾಡಿದ್ದ.
Leave A Reply