1984ರ ಸಿಖ್ ಹತ್ಯೆ ವೇಳೆ ರಾಜೀವ್ ಗಾಂಧಿ ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಹೇಳಿದ್ದು ಯಾರು ಗೊತ್ತೇ?
ದೆಹಲಿ: 1984ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹತ್ಯೆಯಾದ ಬಳಿಕ ದೆಹಲಿ ಸೇರಿ ದೇಶದ ಹಲವೆಡೆ ಮೂರು ಸಾವಿರಕ್ಕೂ ಅಧಿಕ ಸಿಖ್ಖರ ಮಾರಣಹೋಮವಾಗಿದ್ದು ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯ.
ಈ ಅಧ್ಯಾಯದ ಕೆಲವೊಂದಿಷ್ಟು ಪುಟಗಳನ್ನು ಪಂಜಾಬಿನ ಮಾಜಿ ಉಪ ಮುಖ್ಯಮಂತ್ರಿ, ಅಕಾಲಿದಳ ಪಕ್ಷದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಅವರು ತೆರೆದಿದ್ದು, “ಸಿಖ್ಖರ ಹತ್ಯೆಗೆ ರಾಜೀವ್ ಗಾಂಧಿ ಅವರ ಮೇಲ್ವಿಚಾರಣೆ ಇತ್ತು” ಎಂದು ಆರೋಪಿಸುವ ಮೂಲಕ ಹಳೆ ಘಟನೆಗೆ ಹೊಸ ತಿರುವು ನೋಡಿದ್ದಾರೆ.
ಅಲ್ಲದೆ ಈ ಕುರಿತು ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಬಾದಲ್, “ಹತ್ಯೆ ನಡೆಯುತ್ತಿದ್ದ ವೇಳೆ ರಾಜೀವ್ ಗಾಂಧಿ ಅವರು ದೆಹಲಿಯ ಹಲವು ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ” ಎಂದು ಟೈಟ್ಲರ್ ಹೇಳಿದ್ದಾರೆ. ಹಾಗಾದರೆ ಹತ್ಯೆಗೆ ರಾಜೀವ್ ಮೇಲ್ವಿಚಾರಣೆ ಇತ್ತು ಎಂದಾಯಿತಲ್ಲ ಎಂದು ಬಾದಲ್ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಇದೊಂದು ಗಂಭೀರ ಪ್ರಕರಣವಾಗಿದ್ದು, ಜಗದೀಶ್ ಟೈಟ್ಲರ್ ಅವರು ಹೇಳಿರುವ ಹೇಳಿಕೆಯನ್ನು ಪಡೆದು ಕೇಂದ್ರ ತನಿಖಾ ದಳ ಈ ಕುರಿತು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಸಹ ಬಾದಲ್ ಒತ್ತಾಯಿಸಿದ್ದಾರೆ.
ಇದೇ ತಿಂಗಳು ಸಿಖ್ಖರ ಹತ್ಯೆ ಆರೋಪದಲ್ಲಿ ಸಿಲುಕಿದ 186 ಜನರ ವಿರುದ್ಧದ ಪ್ರಕರಣಗಳನ್ನು ಮರುತನಿಖೆ ಮಾಡಲು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿರುವ ಬೆನ್ನಲ್ಲೇ ಟೈಟ್ಲರ್ ಹಾಗೂ ಬಾದಲ್ ಅವರು ಈ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಹಲವು ತಿರುವು ಸಿಗುವ ಲಕ್ಷಣಗಳನ್ನು ಅಲ್ಲಗಳೆಯುವಂತಿಲ್ಲ.
ಆದಾಗ್ಯೂ, “ದೊಡ್ಡ ಆಲದ ಮರ ಉರುಳಿದಾಗ, ಭೂಮಿ ನಲುಗುವುದು ಸಹಜ” ಎಂದು ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಉಂಟಾದ ಗಲಭೆ ಕುರಿತು ರಾಜೀವ್ ಗಾಂಧಿ ಈ ಮಾತು ಹೇಳುವ ಮೂಲಕ ಹತ್ಯಾಕಾಂಡ ಸ್ಪಷ್ಟಪಡಿಸಿಕೊಂಡಿದ್ದರು ಎಂಬ ಮಾತು ಸಹ ಚಾಲ್ತಿಯಲ್ಲಿದೆ.
Leave A Reply