45 ಹಿಂದೂಯೇತರರ ಅಮಾನತಿಗೆ ತಿರುಪತಿ ತಿರುಮಲ ದೇವಸ್ಥಾನಂ ಚಿಂತನೆ!
ಹೈದರಾಬಾದ್: ತಿರುಪತಿಯ ಪ್ರಸಿದ್ಧ ತಿರುಮಲ ದೇವಾಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ 45 ಹಿಂದೂಯೇತರ ಸಿಬ್ಬಂದಿಯನ್ನು ಅಮಾನತು ಮಾಡಲು ದೇವಸ್ಥಾನ ನಿರ್ವಹಣೆಯ ಹೊಣೆ ಹೊತ್ತಿರುವ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದೆ.
ಇತ್ತೀಚೆಗೆ ಟಿಟಿಡಿ ಉದ್ಯೋಗಿಯೊಬ್ಬರು ಟಿಟಿಡಿ ಕಾರ್ ತೆಗೆದುಕೊಂಡು ಚರ್ಚಿಗೆ ಹೋಗಿ ಪ್ರಾರ್ಥನೆ ಮಾಡುವ ಮೂಲಕ ಸಮಿತಿಯ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದ ಹಿನ್ನೆಲಯಲ್ಲಿ ದೇವಸ್ಥಾನ ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಈ ಘಟನೆ ತಿಳಿದ ಬಳಿಕ ಸುಮಾರು 45 ಹಿಂದೂಯೇತರ ಸಿಬ್ಬಂದಿಯನ್ನು ಗುರುತಿಸಿದ್ದು, ಅವರಿಗೆ ನೋಟಿಸ್ ಸಹ ನೀಡಲಾಗಿತ್ತು. ಈಗ ದೇವಸ್ಥಾನ ಸಮಿತಿಯಿಂದ ಅಮಾನತು ಮಾಡಲು ನಿರ್ಧರಿಸಿದ್ದು, ಆ 45 ಸಿಬ್ಬಂದಿಯೂ ರಾಜ್ಯ ಸರ್ಕಾರದ ವಿವಿಧೆಡೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
45 ಉದ್ಯೋಗಿಗಳನ್ನು ಅಮಾನತುಗೊಳಿಸಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹಾಗೊಂದು ವೇಳೆ ಅಮಾನತು ಆದರೆ ಅವರೆಲ್ಲರನ್ನೂ ಬೇರೆ ಕಡೆ ನಿಯೋಜನೆ ಮಾಡಲಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಟಿಟಿಡಿ ಭದ್ರತಾ ಮುಖ್ಯಸ್ಥ ಅಕೆ ರವಿಕೃಷ್ಣ, “45 ಹಿಂದೂಯೇತರ ಸಿಬ್ಬಂದಿಯಲ್ಲಿ 39 ಜನ 1989-2007ರ ಅವಧಿಯಲ್ಲಿ ನೇಮಕವಾಗಿದ್ದು, ಅವರು ಸಮಿತಿಯ ಹಲವು ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ನೇಮಕದ ವೇಳೆ ಅವರಿಗೆ ಹಲವು ನಿಬಂಧನೆ ಹಾಕಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
Leave A Reply