• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಶೀ ಮಠಾಧೀಶರ ಚಾತುರ್ಮಾಸ ವ್ರತಾರಂಭ.

TNN Correspondent Posted On July 13, 2017


  • Share On Facebook
  • Tweet It

ಶ್ರೀ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಕೊಂಚಾಡಿ ಸ್ವಮಠದಲ್ಲಿ ಚಾತುರ್ಮಾಸ ವ್ರತಾರಂಭ
ಕೊಂಚಾಡಿಯ ಶ್ರೀ ವೆಂಕಟರಮಣ ದೇವರ ಪ್ರತಿಷ್ಠೆಯಾಗಿ 2017 ರ ಅಕ್ಷಯ ತದಿಗೆಗೆ 50 ವರ್ಷಗಳು. ತಮ್ಮ ಊರಿಗೆ ದೇವತಾ ಉಪಾಸನೆ, ಭಜನೆ ಹಾಗೂ ದೇವರ ಮೇಲಿನ ಭಕ್ತಿ ಶ್ರದ್ಧೆಗಳನ್ನು ವ್ಯಕ್ತಪಡಿಸಲು ಅನುಕೂಲವಾದ ಒಂದು ದೇವರ ಮಂದಿರ ಬೇಕು ಎಂಬ ಗೌಡಸಾರಸ್ವತ ಬ್ರಾಹ್ಮಣ ಸಮಾಜದವರ ಕಳಕಳಿಯ ಪ್ರಾರ್ಥನೆಗೆ ಗುರುಗಳಾದ ಪರಮ ಪೂಜ್ಯ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿಯವರು ಕರುಣಿಸಿದ್ದು ಸ್ವಮಠದ ಶಾಖೆಯ ಜೊತೆಗೆ ಗೌಡಸಾರಸ್ವತ ಬ್ರಾಹ್ಮಣರ ಆರಾಧ್ಯದೇವರಾದ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ 1987ರಲ್ಲಿ ಅದೇ ಪ್ರಾಂಗಣದ ಪಾಶ್ರ್ವಾದಲ್ಲಿ ಕುಲಸ್ವಾಮಿನಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾವ ಯತಿವರೇಣ್ಯ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ಪ್ರತಿಷ್ಠಾಪಿತಗೊಂಡ ಶ್ರೀ ಕಾಶೀಮಠದ ಆಡಳಿತಕ್ಕೆ ಒಳಪಟ್ಟ ಈ ಉಭಯ ದೇವಸ್ಥಾನಗಳಿಂದಾಗಿ ಕೊಂಚಾಡಿ ಊರಿನ ಚಹರೆಯೇ ಬದಲಾಗಿ ಹೋಯಿತು. ದೇವಾಲಯಗಳ ಘಂಟಾನಾದ, ಭಜನೆ, ಕೀರ್ತನೆ, ಮಂತ್ರೋಚ್ಚಾರಗಳ ದಿವ್ಯನಿನಾದದಿಂದ ಊರ ಪರಿಸರವಿಡೀ ಅಲೌಕಿಕ ಕಾಂತಿಯಿಂದ ತುಂಬಿಹೋಯಿತು. ಉಭಯ ದೇವಾಲಯಗಳನ್ನು ಸಂದರ್ಶಿಸುವ ಭಜಕರ ಸಂಖ್ಯೆಗೆ ಮೇರಯೇ ಇಲ್ಲವಾಯಿತು.

1967ರಲ್ಲಿ ಶ್ರೀಕಾಶೀಮಠದ ಶಾಖೆಯೊಡನೆ ಪ್ರತಿಷ್ಢಾಪನೆಗೊಂಡು ಶ್ರೀ ವೆಂಕಟರಮಣನಿಗೀಗ ಸ್ವರ್ಣ ವರ್ಷಾಚರಣೆಯ ಸಂಭ್ರಮ. ಈ ಸಂಭ್ರಮವನ್ನು ಸಹಸ್ರಕುಂಭಾಭಿಷೇಕದೊಡನೆ ಆಚರಿಸಬೇಕೆನ್ನುವ ಪರಮ ಪೂಜ್ಯ ಗುರುವರ್ಯರಾದ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿಯವರು ಅಪೇಕ್ಷೆ ಕೈಗೂಡುವ ಮುನ್ನವೇ ಅವರು 2016ರ ಜನವರಿ ತಿಂಗಳ 17ರಂದು ವೃಂದಾವನಸ್ಥರಾಗಿ ವಿಷ್ಣುಯುಜ್ಯವನ್ನು ಹೊಂದಿದರು. ಅವರು ಸಂಕಲ್ಪಿಸಿದ ಮನದ ಇಚ್ಛೆಯನ್ನು ಶ್ರೀಕಾಶೀಮಠಾದ ವಿದ್ಯಮಾನ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪೂರೈಸುತಿದ್ದಾರೆ. ತಮ್ಮ ಗುರುಗಳು ಕೊಂಚಾಡಿಯ ಸಮಾಜಬಾಂಧವರಿಗೆ ನೀಡಿದ ಅಪೂರ್ವ ಕೊಡುಗೆಗಳಂತೆಯೇ, ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರೂ ತಮ್ಮ ಕರಕಮಲಗಳಿಂದ ಶ್ರೀ ವೆಂಕಟರಮಣ ದೇವರಿಗೆ ಇದೇ ಬರುವ ನವೆಂಬರ್ 9 ರಂದು ನಡೆಯಲಿರುವ ಸಹಸ್ರ ಕುಂಭಾಭಿಷೇಕ ಸಮಾರಂಭದ ಜೊತೆಗೆ ಈ ಸಂವತ್ಸರದ ತಮ್ಮ ಚಾತುರ್ಮಾಸ ವೃತಾಚರಣೆಯನ್ನು ಕೊಂಚಾಡಿಯ ಸ್ವಮಠದಲ್ಲಿ ಕೈಗೊಳ್ಳುವುದಾಗಿ ನಿರ್ಧರಿಸಿ ಸಮಾಜಬಾಂಧವರಿಗೆ ಅಮಿತ ಆನಂದವನ್ನು ದಯಪಾಲಿಸಿರುತ್ತಾರೆ. ಪರಮ ಪೂಜ್ಯ ಶ್ರೀ ಕಾಶೀಮಠದ ಗುರುಪರಂಪರೆಯ 21ನೇ ಯತಿವರ್ಯರಾಗಿ 2016ರ ಜನವರಿ 28 ರಂದು ಪಟ್ಟಾಭಿಷಿಕ್ತರಾದ ಬಳಿಕ ತಮ್ಮ ಸ್ವಮಠದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಪ್ರಥಮ ಚಾತುರ್ಮಾಸವೂ ಇದಾಗಿರುವುದರಿಂದ, ಸಮಾಜಬಾಂಧವರ ಸಂಭ್ರಮಕ್ಕೆ ಮೇರೆಯೇ ಇಲ್ಲವಾಗಿದೆ.

450 ವರ್ಷಗಳ ಅವಿಚಿನ್ನ ಭವ್ಯ ಪರಂಪರೆಯುಳ್ಳ ಶ್ರೀ ಕಾಶೀ ಮಠ ಸಂಸ್ಥಾನದ 21 ಯತಿವರ್ಯರಾಗಿ ಋಗ್ವೇದ, ವೇದ, ಉಪನಿಷತ್, ಮಧ್ವ ಸಿದ್ದಾಂತ, ತಂತ್ರಶಾಸ್ತ್ರಾದಿಗಳಲ್ಲಿ ಪರಿಣತಿಯನ್ನು ಅತಿ ಶೀಘ್ರ ಸಾಧಿಸಿ, ಸನ್ಯಾಸ ಧೀಕ್ಷೆ ಕೈಗೊಂಡ 8 ವರ್ಷಗಳ ಅಲ್ಪ ಕಾಲಾವಧಿಯಲ್ಲಿ ಯಶಸ್ವಿಯಾಗಿ ಸುಧಾ ಮಂಗಲೋತ್ಸವವನ್ನು ಆಚರಿಸಿಕೊಂಡ ಪರಮಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು, ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರಲ್ಲಿ ಅತೀವ ಭಕ್ತಿ, ಶ್ರದ್ಧೆಯುಳ್ಳ ಕೃಪಾವಂತ ತಪೋನಿಷ್ಠರು. ಭವ್ಯ ಪರಂಪರೆಯ ಶ್ರೀಕಾಶೀ ಮಠ ಸಂಸ್ಥಾನಕ್ಕೆ ತಮ್ಮ ತರುವಾಯ ಸಮರ್ಥ ಆಧ್ಯಾತ್ಮಿಕ ಉತ್ತರಾಧಿಕಾರಿಯನ್ನು ನೀಡಿದ ತೃಪ್ತಿಯೊಂದಿಗೆ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸಮಾಧಿಗೆ ಸಂದಿದರು.

ಇದೇ ಜುಲೈ 3ರಂದು ತಮ್ಮ ಉಡುಪಿ ಮೊಕ್ಕಾಂನಿಂದ ಕೊಂಚಾಡಿಯ ಸ್ವಮಠಕ್ಕೆ ಆಗಮಿಸಿದ ಪೂಜ್ಯ ಗುರುವರ್ಯರನ್ನು ಪೂರ್ಣಕುಂಭ, ವಾದ್ಯಘೋಷ ಸಹಿತ ಸಕಲ ಸಂಪ್ರದಾಯ ಬದ್ದ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಶಾಖಾ ಮಠ ಹಾಗೂ ಉಭಯ ದೇಗುಲಗಳು ವಿದ್ಯುತ್ ದೀಪ, ಹೂ, ತಳಿರು ತೋರಣಗಳಿಂದ ಶೋಭಾಯಮಾನವಾಗಿ ಸಮಗ್ರ ದೇಗುಲ ಸಮುಚ್ಛಯವೇ ಬೆಳಕಿನ ಪುಂಜವಾಗಿ ಸಂಭ್ರಮೋಲ್ಲಾಸಗಳ ಮೊತ್ತವಾಗಿ ಕಂಗೊಳಿಸುತಿತ್ತು. 10-07-2017ರ ಆಷಾಢ ಬಹುಳ ಪಾಡ್ಯದಂದು ಶ್ರೀಮದ್ ಸುಕೃತೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆಯು ಭಾವಚಿತ್ರ ಸಹಿತ ರಜತ ಪಲ್ಲಕಿ ಉತ್ಸವ ಶ್ರೀ ಸುಕೃತೀಂದ್ರ ತೀರ್ಥ ಗುರುಗುಣಗಾನ, ಲಘುವಿಷ್ಣು ಅಭಿಷೇಕ, ಸ್ವರ್ಣ ಗರುಡ ವಾಹನ ಪೂಜೆ ನಡೆದಿದೆ. 11-07-2017ರ ಆಷಾಢ ಬಹುಳ ದ್ವಿತೀಯೆಯಂದು ಶ್ರೀ ಸಂಸ್ಥಾನದ ದೇವರುಗಳಿಗೆ ಸಾನಿಧ್ಯ ಹವನಗಳು ನಡೆದಿವೆ. ಇಂದು ದಿನಾಂಕ 14-07-2017ರ ಶುಕ್ರವಾರ ಆಷಾಢ ಬಹುಳ ಪಂಚಮಿಯಂದು ಶ್ರೀ ಸಂಸ್ಥಾನದ ದೇವರುಗಳಿಗೆ ಪಂಚಾಮೃತ ಅಭಿಷೇಕ, ಊಧ್ವರ್ಜನ, ಶತಕಲಶಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕ, ಮೃತಿಕಾನಯನ, ಮುದ್ರಾಧಾರಣ, ಮಹಾಪೂಜೆ, ಮೃತಿಕಾ ಪೂಜೆಗಳ ಬಳಿಕ ಪರಮಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದರು ಚಾತುರ್ಮಾಸ ವೃತಸ್ವೀಕಾರ ಮಾಡಲಿರುವರು. ಬಳಿಕ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಲಿರುವರು.

ಪರಮಪೂಜ್ಯರ ಚಾತುರ್ಮಾಸ ವೃತಾಚರಣೆಯ ಸಂದರ್ಭದಲ್ಲಿ ದೇಶವಿದೇಶಗಳಿಂದಾಗಮಿಸಲಿರುವ ಭಕ್ತರ ವಾಸ್ತವ್ಯ ಹಾಗೂ ಇತರ ಅನುಕೂಲಗಳಿಗಾಗಿಶ್ರೀ ಮಠದ ಮೇಲಿನ ಅಂತಸ್ತಿನ ನೆಲಕ್ಕೆ ಆಧುನಿಕ ನೆಲಹಾಸುಗಳನ್ನು ಹಾಸಿ ಸ್ನಾನ ಗೃಹಗಳ ಸಹಿತ ಸುಮಾರು 6500 ಚದರಡಿಯ ಪ್ರದೇಶವನ್ನು ಸುಸಜ್ಜಿತ ವಿಶ್ರಾಂತಿಯ ಕೇಂದ್ರವಾಗಿ ನಿರ್ಮಿಸಲಾಗಿದೆ. ಉಭಯ ದೇಗುಲಗಳ ಸಮ್ಮುಖ ಗೋಪುರದ ಮುಂಭಗದ ಪ್ರಾಂಗಣವನ್ನು ತಾತ್ಕಾಲಿಕ ಛಾವಣಿಗಳನ್ನು ಹೊದೆಸುವ ಮೂಲಕ ಸುರಿಯುವ ಮಳೆಯಿಂದ ರಕ್ಷಣೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ.ನೂತನವಾಗಿ ನಿರ್ಮಿಸಲಾಗುತ್ತಿರುವ ಎರಡಂತಸ್ತಿನ ಭವ್ಯವಾದ ಶ್ರೀ ಸುಧೀಂದ್ರ ಸಭಾಭವನದ ಕೆಳಂತಸ್ತಿನಲ್ಲಿ ಸುಸಜ್ಜಿತ ಪಾಕಶಾಲೆ ಹಾಗೂ ಸುಮಾರು 750 ಮಂದಿ ಏಕಕಾಲಕ್ಕೆ ಉಣ್ಣುವ ಸ್ಥಳಾವಕಾಶ ಹೊಂದಿರುವ ಭೋಜನಾ ಶಾಲೆಯನ್ನು ಕಲ್ಪಿಸಲಾಗೆದೆ. ಶ್ರೀ ಮಠದ ಸಿಬ್ಬಂದಿಗಳ ವಾಸ್ತವ್ಯ, ಕಾರ್ಯಾಲಯ, ದಾಸ್ತಾನು ಕೊಠಡಿ, ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ, ಶೌಚ ವ್ಯವಸ್ಥೆ ಎಲ್ಲವೂ ಸುಸಜ್ಜಿತವಾಗಿದೆ.

ಮಂಗಳೂರು ಮಹಾನಗರವೂ ಸೇರಿದಂತೆ, ಕಾವೂರಿನಿಂದ ವ್ಯಾಸನಗರದವರೆಗಿನ ಸಮಸ್ತ ಗೌಡಸಾರಸ್ವತ ಬ್ರಾಹ್ಮಣ ಸಮಾಜ ಸ್ತ್ರೀಪುರುಷ ಸಮವಸ್ತ್ರಧಾರೀ ಸ್ವಯಂ ಸೇವಕರ ತಂಡ ವಾರದ ಏಳು ದಿನಗಳಿಗೆ ಒಂದೊಂದು ವಿಭಿನ್ನ ತಂಡವಾಗಿವಾಗಿ ಕರಸೇವೆಯಲ್ಲಿ ನಿರತವಾಗಿದೆ. ಶ್ರೀಮಠದ ದೇವರ ಬೆಳಗಿನ ಪೂಜೆಯ ಸಮಯದಲ್ಲಿ ಸ್ತೋತ್ರಾದಿಗಳನ್ನು ಪಠಿಸುವ ಮಾತೆಯರ ತಂಡ ಮಧ್ಯಾಹ್ನ ಹಾಗೂ ರಾತ್ರಿ ಪೂಜಾ ಸಮಯದ ಭಜನಾ ತಂಡ ಹೂ, ತುಳಸಿ ಇತ್ಯಾದಿ ಪೋಣಿಸುವವರ ತಂಡ, ಭೋಜನಾ ಶಾಲೆ, ಪಾಕ ಶಾಲೆಗಳಲ್ಲಿ ಕಾರ್ಯನಿರತ ಸ್ವಯಂಸೇವಕರ ತಂಡ, ಕಾರ್ಯಾಲಯ, ಸ್ವಾಗತ ಸಮಿತಿ, ವಸತಿ ಸಮಿತಿ, ಉಗ್ರಾಣ ಸಮಿತಿ, ಪೂಜಾ ಸಮಿತಿ, ಸಾಂಸ್ಕøತಿಕ ಸಮಿತಿ-ಹೀಗೆ ಹತ್ತು ಹಲವು ಸಮಿತಿಗಳು ರೂಪುಗೊಂಡು ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಚಾತುರ್ಮಾಸ ಸಮಿತಿಯ ಗೌರವಾಧ್ಯಕ್ಷರಾದ ಡಾ||ಪಿ.ದಯಾನಂದ ಪೈ, ಅಧ್ಯಕ್ಷರಾದ ಶ್ರೀ ಎಂ ಜಗನ್ನಾಥ ಶೆಣೈ ಹಾಗೂ ಸರ್ವಸದಸ್ಯರ ತಂಡ, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕುಡ್ಪಿ ಮಾಧವ್ ಶೆಣೈ ಹಾಗೂ ಸರ್ವ ಸದಸ್ಯರು, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಾರೂರು ಪದ್ಮನಾಭ ಪೈ ಹಾಗೂ ಸರ್ವ ಸದಸ್ಯರು ಪೂರ್ಣ ಪ್ರಮಾಣದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಶ್ರೀ ಮಠದಲ್ಲಿ ಈ ಚಾತುರ್ಮಾಸ ವೃತಾಚರಣೆಯ ಕಾಲಾವಧಿಯ ಉದ್ದಕ್ಕೂ ಬರುವ ವಿವಿಧ ಹಬ್ಬ, ಹರಿದಿನ, ವಿಶೇಷ ಪರ್ವಾದಿಗಳ ಸಂದರ್ಭದ ವಿವಿಧ ಧಾರ್ಮಿಕ ವಿಧಿ, ಹೋಮ ಹವನಾದಿಗಳಲ್ಲದೆ ದಿನಾಂಕ 12-08-2017 ರಿಂದ 19-08-2017ರ ವರೆಗೆ ಭಜನಾ ಸಪ್ತಾಹ ನಡೆಯಲಿದೆ. 9-07-2017ರ ಭಾನುವಾರದಿಂದ ಆರಂಭವಾಗಿ 08-07-2017ರ ವರೆಗೆ ಪ್ರತಿ ಭಾನುವಾರ ಸಂಜೆ 5;30 ಗಂಟೆ ಯಿಂದ 8ರ ವರೆಗೆ ಗೌಡಸಾರಸ್ವತ ಸಮಾಜದ ಉದಯೋನ್ಮುಖ ಹಾಗೂ ಖ್ಯಾತ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ, ನಾಟಕ, ಭರತನಾಟ್ಯಾದಿ ಕಾರ್ಯಕ್ರಮಗಳಿರುತ್ತವೆ. ಅಷ್ಠಮಿಯ ಸಂದರ್ಭದಲ್ಲಿ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗುವುದು ಮಾತ್ರವಲ್ಲ ಸ್ವಚ್ಚತಾ ಅಭಿಯಾನ, ವನಮಹೋತ್ಸವ ಸಸ್ಯ ಶ್ಯಾಮಲಾ ಕಾಯ್ಕ್ರಮ, ಉದ್ಯೋಗ ಮಾಹಿತಿ ವೈದ್ಯಕೀಯ ಶಿಭಿರ, ಡಿಜಿಟಲ್ ಬ್ಯಾಂಕಿಂಗ್ ಕುರಿತು ಮಾಹಿತಿ,ಯುವ ಜನರಿಗೆ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆ, ಭಜನೆ, ಸ್ತೋತ್ರ ಹಾಗೂ ಚಿತ್ರ ರಚನಾ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಉದ್ಯೋಗ ಮೇಳ, ಸ್ಕಾಲರ್ಶಿಪ್ ವಿತರಣೆ, ಗೋಸಂರಕ್ಷಣೆ, ಸಂಧ್ಯಾ ವಂದನ ಶಿಬಿರ, ಭಾಗವತ ಸಪ್ತಾಹ, ನಗರ ಭಜನೆ ಕಾರ್ಯಕ್ರಮ ಇವೆಲ್ಲವನ್ನು ಪರಮ ಪೂಜ್ಯ ಗುರುವರ್ಯರ ಆದೇಶಾನುಸಾರ ಅವರ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಸರಿಯಾಗಿ ಆಯೋಜಿಸಲಾಗುವುದು.

ಕೊಂಚಾಡಿ ಸ್ವಮಠದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಪರಮ ಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಈ ಐತಿಹಾಸಿಕ ಚಾತುರ್ಮಾಸವು ಭಕ್ತಿ, ಜ್ಞಾನ, ವೈರಾಗ್ಯಗಳು ಮುಪ್ಪುರಿಗೊಂಡ ಅದ್ವಿತೀಯ ಚಾತುರ್ಮಾಸವಾಗಿ ಪರಿಣಮಿಸಲಿದ್ದು ಗುರುವರ್ಯರ ಚಿತ್ತ ಪ್ರಬೋಧಕ ಮಾರ್ಗದರ್ಶನ ಪ್ರವಚನ ಹಾಗೂ ಆಶೀರ್ವಾದಗಳಿಗಾಗಿ ಸಮಸ್ತ ಸಮಾಜವು ನತಮಸ್ತಕವಾಗಿ ಕಾದಿದೆ, ತಮ್ಮ ಸೇವಾಕೈಂಕರ್ಯವನ್ನು ಪದತಲದಲ್ಲಿ ಸಲ್ಲಿಸಲು ಅಣಿಯಾಗಿದೆ.

ಲೇಖನ: ಶಕುಂತಲ ಆರ್ಕಿ ಣಿ
ಚಿತ್ರ: ಮಂಜು ನೀರೇಶ್ವಾಲ್ಯ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search