ಹಿಂದೂ ಸಹೋದರರೇ ನನ್ನ ಪಾಲಿನ ದೇವರು ಎನ್ನುವ ಆ ಮುಸ್ಲಿಂ ವ್ಯಕ್ತಿ ಯಾರು, ಆತನ ಕತೆಯೇನು?

ಲಖನೌ: ದೇಶದಲ್ಲಿ ಅಸಾದುದ್ದೀನ್ ಓವೈಸಿಯಂಥಹ ಮನಸ್ಥಿತಿಯವರಿಂದ ಹಿಂದೂ-ಮುಸ್ಲಿಮರ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ ಹಾಗೂ ಹಿಂದೂಗಳು ಎಂದಿಗೂ ಸೌಹಾರ್ದ ಮನಸ್ಸಿನವರು ಎಂಬುದು ಉತ್ತರ ಪ್ರದೇಶದಲ್ಲಿ ಸಾಬೀತಾಗಿದೆ.
ಉತ್ತರ ಪ್ರದೇಶದ ಕಾಂಸ್ಗಂಜ್ ನಲ್ಲಿ ಗಣರಾಜ್ಯೋತ್ಸವದ ದಿನ ದುಷ್ಕರ್ಮಿಗಳ ದಾಳಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಚಂದನ್ ಗುಪ್ತಾ ಮೇಲೆ ಹಲ್ಲೆಯಾದರೂ ತಾಳ್ಮೆ ಕಳೆದುಕೊಳ್ಳದ ಹಿಂದೂಗಳು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಅಕ್ರಮ್ ಹಬೀಬ್ ಎಂಬ ಮುಸ್ಲಿಂ ವ್ಯಕ್ತಿ ತಮ್ಮ ಪತ್ನಿಯನ್ನು ಕರೆದುಕೊಂಡು ಬರಲು ಅಜ್ಮೀರ್ ಗೆ ತೆರಳುತ್ತಿದ್ದಾಗ ಕಾಸ್ಗಂಜ್ ನಲ್ಲಿ ಸುಮಾರು 100-150 ಜನರ ಗುಂಪು ದಾಳಿ ಮಾಡಿ, ಹಲ್ಲೆಗೈದಿದ್ದಾರೆ. ಆ ವೇಳೆ ಒಂದು ಕಣ್ಣು ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿದ್ದ ಅವರನ್ನು ಹಿಂದೂಗಳು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಮಾತನಾಡಿರುವ ಹಬೀಬ್, “ನಾನು ಪ್ರಾಣಾಪಾಯದಲ್ಲಿದ್ದ ಸಂದರ್ಭದಲ್ಲಿ ಹಿಂದೂ ಸಹೋದರರು ಬಂದು ನನ್ನ ಪ್ರಾಣ ಕಾಪಾಡಿದ್ದಾರೆ. ಅವರಿಂದಲೇ ನಾನು ಇಂದು ಬದುಕಿದ್ದು, ಅವರೇ ನನ್ನ ಪಾಲಿನ ದೇವರು” ಎಂದು ಹಬೀಬ್ ಭಾವುಕರಾಗಿ ನುಡಿದಿದ್ದಾರೆ. ಅಲ್ಲದೆ ಹಬೀಬ್ ಕುಟುಂಬಸ್ಥರು ಸಹ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.