ಮೋದಿ ಆಗಮನಕ್ಕೆ ಅರಮನೆ ಮೈದಾನ ಸಜ್ಜು, ಸರ್ಕಾರದ ತಂತ್ರ ನುಜ್ಜು ನುಜ್ಜು!

ಬೆಂಗಳೂರು: ಜನವರಿ 25ರಂದು ರಾಜ್ಯಕ್ಕೆ ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಂದ್ ಮಾಡಿಸಿ ಉಪಟಳ ಮಾಡಿದರೂ ಅಪಾರ ಜನ ಸೇರಿ ರಾಜ್ಯ ಸರ್ಕಾರಕ್ಕೆ ಮುಖಭಂಗ ಮಾಡಿದ ಬೆನ್ನಲ್ಲೇ, ಫೆ.4ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಅರಮನೆ ಮೈದಾನ ಸಜ್ಜಾಗಿದೆ.
ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮೋದಿ ಆಗಮಿಸಲಿದ್ದು, ರಾಜ್ಯ ಬಿಜೆಪಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಂತಿಮ ಹಂತ ತಲುಪಿದೆ.
ಬಂದ್ ನಡುವೆಯೇ ಜನಸಾಗರ
ಮೋದಿ ಆಗಮನದ ಹಿನ್ನೆಲೆಯಲ್ಲಿ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡಪರ ಸಂಘಟನೆಗಳು ಭಾನುವಾರವೂ ಬಂದ್ ಗೆ ಕರೆ ನೀಡಿದ್ದು, ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರವಿದೆ ಎಂಬ ಆರೋಪವಿದೆ. ಆದರೆ ಇದಕ್ಕೆ ಸೆಡ್ಡು ಹೊಡೆದಿರುವ ಬಿಜೆಪಿ ಬಂದ್ ಇದ್ದರೂ ಸುಮಾರು 4 ಲಕ್ಷ ಜನರನ್ನು ಒಗ್ಗೂಡಿಸುವ ಯೋಜನೆ ರೂಪಿಸಿದೆ. ನಿರೀಕ್ಷೆಯಷ್ಟು ಜನ ಬಂದರೆ ಅಲ್ಲಿಗೆ ಸರ್ಕಾರಕ್ಕೆ ಮತ್ತೊಂದು ಮುಖಭಂಗವಾದಂತೆಯೇ ಸರಿ.
ರಾಜ್ಯ ಸರ್ಕಾರಕ್ಕೇಕೆ ನಡುಕ?
ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ದೇಶದ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಮೋಡಿ ಮಾಡಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಲ್ಲಿ ಈ ಜೋಡಿ ಕರ್ನಾಟಕದಲ್ಲಿ ಯಶಸ್ವಿಯಾಗಿ ರ್ಯಾಲಿ ಮಾಡಿ ಜನರ ಮನಸೆಳೆದರೆ ತಮ್ಮಪಟ್ಟಕ್ಕೆ ಕುತ್ತು ಬರುತ್ತದೆ ಎಂಬ ಭೀತಿಗೊಳಗಾಗಿರುವ ಸಿದ್ದರಾಮಯ್ಯನವರು ಬಂದ್ ನಾಟಕದ ಮೂಲಕ ಇಬ್ಬರನ್ನೂ ಹೆಣೆಯಲು ಮುಂದಾಗಿದ್ದಾರೆ. ಮೈಸೂರಿನಲ್ಲಿ ಜನವರಿ 25ರಂದು ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ 27ಕ್ಕೆ ನಿಗದಿಯಾಗಿದ್ದ ರಾಜ್ಯ ಬಂದ್ 25ಕ್ಕೇ ನಡೆಯುವಂತೆ ಮಾಡಿದ್ದರು ಸಿಎಂ ಸಿದ್ದರಾಮಯ್ಯ.
ಹೇಗೆ ನಡೆಯುತ್ತಿದೆ ಸಿದ್ಧತೆ?
ರಾಜ್ಯ ಸರ್ಕಾರದ ತಂತ್ರಗಳೆಲ್ಲವನ್ನೂ ಮೀರಿ ಮೋದಿ ಆಗಮಿಸುವ ಸಮಾವೇಶ ಭರ್ಜರಿಯಾಗಿ ನಡೆಸಲು ಬಿಜೆಪಿ ಟೊಂಕಕಟ್ಟಿ ನಿಂತಿದ್ದು, ಸಿದ್ಧತೆ ಕೊನೆ ಹಂತಕ್ಕೆ ಬಂದಿದೆ. 40 ಅಡಿ ಉದ್ದ, 80 ಅಡಿ ಅಗಲ ಹಾಗೂ 20 ಅಡಿ ಎತ್ತರದ ವೇದಿಕೆ ಸಿದ್ಧವಾಗಿದ್ದು, ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಉಸ್ತುವಾರಿಗೆ 300 ಕಾರ್ಯಕರ್ತರನ್ನೊಳಗೊಂಡ ಭದ್ರತಾ ತಂಡ, ಜನರನ್ನು ಕರೆತರಲು ಸಮಿತಿ, ಪೊಲೀಸ್ ಬಂದೋಬಸ್ತ್, ಪಾರ್ಕಿಂಗ್, ಮಿನಿ ಆಸ್ಪತ್ರೆ, ಊಟ, ನೀರಿನ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿದೆ.
Leave A Reply