ಹೆಪ್ಸಿಬಾ,ಪೊನ್ನುರಾಜ್,ಪ್ರಮೋದ್,ಸುಭೋದ್,ಪಂಕಜ್ ಠಾಕೂರ್………..!!!
ಒಂದು ವೇಳೆ ಟೌನ್ ಹಾಲ್ ಅನ್ನು ತನ್ನ ಹೆಸರಿಗೆ ಬರೆಸಿ ದಾಖಲೆ ತಯಾರು ಮಾಡಿಕೊಡಲು ಅಧಿಕಾರಿಗಳು ಸಿದ್ಧರಿದ್ದರೆ ಜನಪ್ರತಿನಿಧಿಗಳು ಅದನ್ನು ಕೂಡ ಮಾಡಲು ಹಿಂಜರಿಯುತ್ತಿರಲಿಲ್ಲ. ಅದು ಕಾನೂನಿನಲ್ಲಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಮೌನವಾಗಿದ್ದಾರೆ. ಇಲ್ಲದಿದ್ದರೆ ನಮ್ಮ ಶಾಸಕರು, ಸಚಿವರು, ಅವರ ಬೆಂಬಲಿಗರು, ಹಿಂಬಾಲಕರು ಪುರಭವನ ತನಗಿರಲಿ, ನೆಹರೂ ಮೈದಾನ ಅವನಿಗಿರಲಿ, ಕದ್ರಿ ಪಾರ್ಕ್ ಇನ್ನೊಬ್ಬನಿಗೆ ಇರಲಿ ಎಂದು ತಮ್ಮೊಳಗೆ ಹಂಚಿಕೊಂಡು ಅದಕ್ಕೆ ದಾಖಲೆಪತ್ರ ಅಧಿಕಾರಿಗಳಿಂದ ಸಿದ್ಧಮಾಡಿಕೊಂಡು ಆರಾಮವಾಗಿ ಇರುತ್ತಿದ್ದರು. ಅದು ಆಗುವುದಿಲ್ಲ ಎಂದ ಅಧಿಕಾರಿಯನ್ನು ನೀರು, ಗಾಳಿ ಇಲ್ಲದ ಜಾಗಕ್ಕೆ ವರ್ಗಾವಣೆ ಮಾಡಿಬಿಡುತ್ತಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್ ವರ್ಗಾವಣೆಗೆ ಕಾರಣವಾದದ್ದು ಹೆಚ್ಚು ಕಡಿಮೆ ಇಂತಹುದೇ ವಿಚಾರ. ಮೂಡಾದ ಹೆಸರಿನಲ್ಲಿ ಆರ್ ಟಿಸಿ ಇರುವ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಯ ಲೇಔಟ್ ನಲ್ಲಿ ಸೇರಿಸಿ ಏಕ ನಿವೇಶನ ಮಾಡಿಕೊಡಲು ಅವರ ಮೇಲೆ ಒತ್ತಡ ಇತ್ತು. ಮೂರುವರೆ ಎಕರೆ ಸರಕಾರಿ ಜಾಗವನ್ನು ಯಾರಿಗಾದರೂ ಎತ್ತಿ ಕೊಡಲಿಕ್ಕೆ ಸಾಧ್ಯಾನಾ? ಕೇಳಿದವರಿಗೆ ಅದ್ಯಾವ ಪರಿ ದುರಾಸೆಯ ಹಸಿವು ಇರಬೇಕು. ಶ್ರೀಕಾಂತ್ ರಾವ್ ಆಗಲ್ಲ ಎಂದು ಬಿಟ್ಟಿದ್ದರು. ಮಂಗಳೂರಿನ ಎಸ್ ಡಿಎಂ ಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶ್ರೀಕಾಂತ್ ರಾವ್ ಅವರಿಗೆ ಮಂಗಳೂರಿನ ಮೇಲೆ ಪ್ರೀತಿ, ಅಭಿಮಾನ ಇದ್ದ ಕಾರಣ ಅವರು ಹಾಗೆ ಯಾವುದ್ಯಾವುದೋ ಸರಕಾರಿ ಜಾಗವನ್ನು ಜನಪ್ರತಿನಿಧಿಗಳ ಇಚ್ಚೆಯಂತೆ ಯಾರ್ಯಾರಿಗೋ ಕೊಡಲು ಸಿದ್ಧರಿರಲಿಲ್ಲ. ಅದಕ್ಕೆ ಸಂಬಂಧಪಟ್ಟ ಫೋನ್ ಗಳನ್ನು ಅವರು ಕ್ಯಾರ್ ಮಾಡಿರಲಿಲ್ಲ. ಅದರೊಂದಿಗೆ ತಮ್ಮ ಬಾಲಗೋಂಚಿಗಳ ಕೆಲಸವನ್ನು ಮೂಡಾ ಆಯುಕ್ತ ಶ್ರೀಕಾಂತ್ ರಾವ್ ಮಾಡದೇ ಇದ್ದದ್ದು ಜನಪ್ರತಿನಿಧಿಗಳ ಕೋಪಕ್ಕೂ ಗುರಿಯಾಗಿತ್ತು. ಅದೆಲ್ಲವೂ ಒಟ್ಟಾಗಿ ಅಚಾನಕ್ ಆಗಿ ಶ್ರೀಕಾಂತ್ ರಾವ್ ಅವರನ್ನು ಇಲ್ಲಿಂದ ಓಡಿಸಿ ಬೇರೆ ಯಾರನ್ನಾದರೂ ಆ ಜಾಗಕ್ಕೆ ತಂದು ಅವರಿಂದ ತಮ್ಮ ಕೆಲಸ ಮಾಡಿಸಲು ರಾಜಕಾರಣಿಗಳ ಸಿದ್ಧತೆ ನಡೆದಿತ್ತು.
ಶ್ರೀಕಾಂತ್ ರಾವ್ ಧೈರ್ಯ ಎಲ್ಲಾ ಅಧಿಕಾರಿಗಳಿಗೂ ಬರಲಿ….
ಆದರೆ ಶ್ರೀಕಾಂತ್ ತಿರುಗಿ ಬಿದ್ದರು. ಕರ್ನಾಟಕ ಆಡಳಿತ ಟ್ರಿಬ್ಯುನಲ್ ಗೆ ದೂರು ಕೊಟ್ಟರು. ಕನಿಷ್ಟ ಎರಡು ವರ್ಷ ಒಂದೇ ಪೋಸ್ಟ್ ನಲ್ಲಿ ಇರಬೇಕಾದ ಅಧಿಕಾರಿಯನ್ನು ಒಂದು ವರ್ಷದ ಒಳಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಕೆಎಟಿ ಆದೇಶ ಕೊಟ್ಟ ಕಾರಣ ಶ್ರೀಕಾಂತ್ ರಾವ್ ಮತ್ತೆ ಅದೇ ಪೋಸ್ಟಿಗೆ ಬಂದಿದ್ದಾರೆ. ಟ್ರಾನ್ಸಫರ್ ಮಾಡಲು ಎಲ್ಲಾ ಪ್ರಯತ್ನ ಮಾಡಿದವರಿಗೆ ಮುಖಭಂಗವಾಗಿದೆ.
ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೂಡ ಮಾಡಬಹುದಿತ್ತು. ಅವರದ್ದು ಕೂಡ ಅವಧಿಪೂರ್ಣ ವರ್ಗಾವಣೆ. ಅಷ್ಟೇ ಅಲ್ಲ ಸಾಮಾಜಿಕ ತಾಣಗಳಲ್ಲಿ ಜನರು ಕೂಡ ಅವರ ಬೆಂಬಲಕ್ಕೆ ನಿಂತಿದ್ದರು. ಪ್ರಯತ್ನ ಮಾಡಿದ್ದರೆ ಸುಧೀರ್ ಕುಮಾರ್ ರೆಡ್ಡಿ ಇಲ್ಲಿಯೇ ಉಳಿಯಬಹುದಿತ್ತು. ಮರಳು ಮಾಫಿಯಾಕ್ಕೆ ಬೆಂಬಲ ಕೊಟ್ಟು ತನ್ನನ್ನು ಓಡಿಸಲು ಪ್ರಯತ್ನ ಮಾಡಿದ್ದ ರಾಜಕಾರಣಿಗಳಿಗೆ ಮರಳು ತಿನ್ನಿಸಬಹುದಿತ್ತು. ಆದರೆ ಸುಧೀರ್ ಕುಮಾರ್ ರೆಡ್ಡಿಗೆ ಎಲ್ಲಾ ಅಧಿಕಾರಿಗಳಂತೆ ಒಂದು ವಿಷಯ ಚೆನ್ನಾಗಿ ಗೊತ್ತಿತ್ತು. ತಾನು ಹಟ ಸಾಧಿಸಿ ಇಲ್ಲಿಯೇ ಉಳಿಯುವುದು ಕಷ್ಟವೇನಲ್ಲ. ಆದರೆ ಇಲ್ಲಿನ ರಾಜಕಾರಣಿಗಳು, ಅವರ ಬಾಲಗಳು ತನ್ನನ್ನು ಸುಮ್ಮನೆ ಕೆಲಸ ಮಾಡಲು ಬಿಡುವುದಿಲ್ಲ. ಅದರ ಬದಲು ಇವರು ಏನನ್ನು ಬೇಕಾದರೂ ಮಾಡಿ ಸಾಯಲಿ ತಾನು ಇಲ್ಲಿ ಅಲ್ಲದಿದ್ದರೆ ಮತ್ತೊಂದು ಕಡೆ ಕೆಲಸ ಮಾಡಬಲ್ಲೆ ಎಂದು ಅಂದುಕೊಂಡು ಹೊರಟು ಹೋಗಿದ್ದಾರೆ. ಎಲ್ಲ ಅಧಿಕಾರಿಗಳು ಕೂಡ ಸುಧೀರ್ ಕುಮಾರ್ ರೆಡ್ಡಿಯವರಂತೆ ಯೋಚಿಸುವುದರಿಂದ ರಾಜಕಾರಣಿಗಳಿಗೆ ಒಂದು ಗ್ಯಾರಂಟಿ ಇದೆ. ಯಾರೂ ಕೂಡ ಕೋರ್ಟಿಗೆ ಹೋಗುವುದಿಲ್ಲ. ಶ್ರೀಕಾಂತ್ ರಾವ್ ಅವರು ಧೈರ್ಯ ಮಾಡಿ ಹೋರಾಡಿ ನ್ಯಾಯ ತೆಗೆದುಕೊಂಡೇ ಮತ್ತೆ ಮೂಡಾಕ್ಕೆ ಮರಳಿದ್ದಾರೆ. ಅವರಿಗೆ ನಿಮ್ಮ ಬೆಂಬಲ ಇರಲಿ.
ಈಸುತ್ತೇನೆ, ಇದ್ದು ಜಯಿಸುತ್ತೇನೆ ಎಂದು ಪ್ರಾಮಾಣಿಕ ಅಧಿಕಾರಿಗಳು ಹೇಳಬೇಕು….
ನಾನು ಹೇಳುವುದೇನೆಂದರೆ ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿ ಕೂಡ ಹೀಗೆ ಮಾಡಬೇಕು. ನಮ್ಮ ರಾಜಕಾರಣಿಗಳು ಓಡಿಸಿದರು ಎಂದ ಕೂಡಲೇ ಎಲ್ಲಿಯಾದರೆ ಎನು ಎಂದು ಅಂದುಕೊಂಡು ಓಡಿ ಹೋಗುವುದಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಪ್ರತಿ ಒಂದು ಕಡೆ ತಾನು ಕನಿಷ್ಟ ಎರಡು ವರ್ಷ ಇದ್ದೇ ಇರುತ್ತೇನೆ. ಇದ್ದ ಎಲ್ಲಾ ಕಡೆ ನ್ಯಾಯಯುತವಾಗಿ ಕೆಲಸ ಮಾಡುತ್ತೇನೆ. ಯಾವ ರಾಜಕಾರಣಿಯ ಒತ್ತಡಕ್ಕೂ ಮಣಿಯುವುದಿಲ್ಲ. ಅಚಾನಕ್ ವರ್ಗಾವಣೆ ಆದರೆ ಕೆಎಟಿಗೆ ಹೋಗುತ್ತೇನೆ ಎಂದು ನಿಶ್ಚಯ ಮಾಡಿಕೊಂಡೇ ಸೇವೆಗೆ ಬರಬೇಕು. ಎಲ್ಲರೂ ಹಾಗೆ ಮಾಡಿದರೆ ನಮ್ಮ ರಾಜಕಾರಣಿಗಳು ತಲೆ ಕೆಳಗೆ ಕಾಲು ಮೇಲೆ ಮಾಡಿ ನಿಂತರೂ ಏನೂ ಆಗುವುದಿಲ್ಲ. ಹೆಪ್ಸಿಬಾ ರಾಣಿ ಕೊರ್ಲಪಾಟಿ ಎನ್ನುವ ದಿಟ್ಟ ಹೆಣ್ಣುಮಗಳು ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಕುರ್ಚಿಯಿಂದ ಏಳೇ ತಿಂಗಳಿಗೆ ಎದ್ದು ಹೋಗುವಾಗ ಮಂಗಳೂರನ್ನು ಹಾಗೆ ಭ್ರಷ್ಟ ರಾಜಕಾರಣಿಗಳ ಕೈಯಲ್ಲಿ ಬಿಟ್ಟುಹೋಗಲ್ಲ ಎಂದು ನಿರ್ಧರಿಸಿದ್ದರೆ ಇವತ್ತಿನ ಮಂಗಳೂರಿನ ಕಥೆನೆ ಬೇರೆಯಾಗುತ್ತಿತ್ತು. ಬೇಕಾಬಿಟ್ಟಿ ಎಸ್ಟಿಮೇಶನ್ ಮಾಡಿ ಜನರ ಕಣ್ಣಿಗೆ ಕೆಲಸ ಆದಂತೆ ಮಾಡಿ ಎಲ್ಲವನ್ನು ನುಂಗುವಂತಹ ವ್ಯವಸ್ಥೆ ನಿಲ್ಲುತ್ತಿತ್ತು.
ಇನ್ನು ದಕ ಜಿಲ್ಲಾಧಿಕಾರಿಯಾಗಿದ್ದ ಪ್ರಾಮಾಣಿಕ ಅಧಿಕಾರಿ ಪೊನ್ನುರಾಜ್ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕೂಡ ಆಗಿದ್ದರು. ಅವರಿಗೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಉಸ್ತುವಾರಿ ನೀಡಲಾಗಿತ್ತು. ಅವರೇ ಇದ್ದಿದ್ದರೆ ತಿನ್ನುವವರಿಗೆ ಕಷ್ಟವಾಗುತ್ತಿತ್ತು. ಸದ್ಯ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ. ಇನ್ನು ಮಂಗಳೂರಿನ ಸ್ಮಾರ್ಟ್ ಸಿಟಿಗೆ ಯಾರು ಗತಿ ಎನ್ನುವುದನ್ನು ದೇವರೇ ನಿರ್ಧರಿಸಬೇಕು. ಇನ್ನು ಅನೇಕ ಜನರಿಗೆ ನೆನಪಿರಬಹುದು. ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಓಡಿಸಲು ಮಂಗಳೂರಿನ ರಾಜಕಾರಣಿಗಳಿಂದ ಪೊಲೀಸ್ ಕಮೀಷನರ್ ಮೇಲೆ ಎಷ್ಟು ಒತ್ತಡ ಇತ್ತೆಂದರೆ ಅವರನ್ನು ರಜೆಯ ಮೇಲೆ ಕಳುಹಿಸಿ ನಂತರ ವರ್ಗಾವಣೆ ಮಾಡಲು ಸಂಚು ನಡೆದಿತ್ತು. ಆದರೆ ರಾತ್ರಿ 10 ಗಂಟೆಗೆ ಜನರ ಪ್ರತಿಭಟನೆ ನಡೆದಾಗಲೇ ಉನ್ನತ ಅಧಿಕಾರಿಗಳಿಗೆ ಗೊತ್ತಾದದ್ದು ಜನ ಸೂಕ್ಷ್ಮವಾಗಿ ಎಲ್ಲವನ್ನು ನೋಡುತ್ತಿದ್ದಾರೆ ಅಂತ. ಇನ್ನು ಲಿಸ್ಟ್ ಮಾಡಲು ಹೋದರೆ ಎಸ್ಪಿ ಪಂಕಜ್ ಕುಮಾರ್ ಠಾಕೂರ್, ಸುಭೋದ್ ಯಾದವ್ ಒಬ್ಬರಾ, ಇಬ್ಬರಾ. ಒಮ್ಮೆ ಡಿಸಿ, ಎಸ್ಪಿ, ಕಮೀಷನರ್ ಕಚೇರಿಯಲ್ಲಿ ಗೋಡೆಗೆ ಹೊಡೆದಿರುವ ಬೋರ್ಡಿನಲ್ಲಿ ಪ್ರಾರಂಭದಿಂದ ಇಲ್ಲಿಯ ತನಕದ ಆಯಾ ಇಲಾಖೆಯ ಅಧಿಕಾರಿಗಳ ಹೆಸರು ಮತ್ತು ಸೇವಾವಧಿಯ ವಿವರ ಹಾಕಿರುತ್ತಾರಲ್ಲ, ಅದರಿಂದ ವರ್ಷದ ಒಳಗೆ ವರ್ಗಾವಣೆ ಆದವರ ಹೆಸರನ್ನು ನೋಟ್ ಮಾಡಿ. ಹೆಚ್ಚಿನವರು ಕಳೆದ ಐದು ವರುಷಗಳಲ್ಲಿ ಇಲ್ಲಿಂದ ವರ್ಗವಾದವರು, ವಿಷಯ ಅರ್ಥವಾಯಿತಲ್ಲ!
Leave A Reply