ಭೂ ಖರೀದಿಗೆ ಶಾರೂಖ್ ಖಾನ್ ನಕಲಿ ದಾಖಲೆ ಸಲ್ಲಿಕೆ, ಖಾನ್ ಮಾಜಿ ಸಿಎ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇಲ್ಲಿದೆ ನೋಡಿ!
ಮುಂಬೈ: ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಕೃಷಿಗೆ ಎಂದು ಭೂಮಿ ಖರೀದಿಸಿ ದೊಡ್ಡದೊಂದು ಬಂಗಲೆ ಕಟ್ಟಿದ ಆರೋಪದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಗೆ ದಿನೇದಿನೆ ಕಂಟಕ ಎದುರಾಗುತ್ತಿದ್ದು, ಆರೋಪ ಸಾಬೀತಾಗುವ ಲಕ್ಷಣ ಗೋಚರಿಸಿವೆ.
ನಿವೇಶನ ಖರೀದಿಸಲು ಶಾರೂಖ್ ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ಸ್ವತಃ ಖಾನ್ ಅವರ ಮಾಜಿ ಚಾರ್ಟರ್ಡ್ ಅಕೌಂಟಂಟ್ ಮೋರೆಶ್ವರ್ ಅಜ್ ಗಾಂವ್ಕರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ಮತ್ತಷ್ಟು ಗಂಭೀರವಾಗುತ್ತಿದೆ.
ಅಷ್ಟೇ ಅಲ್ಲ, ನಾನು ಶಾರೂಖ್ ಆಣತಿಯ ಮೇರೆಗೆ ಅವರ ಜತೆ ಕೆಲಸ ಮಾಡಿದ್ದು, ಸರ್ಕಾರಿ ಕಚೇರಿಗಳ ಮೂಲಕವೇ ಶಾರೂಖ್ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.
1991ರಲ್ಲಿ ಕೃಷಿಗಾಗಿ ಎಂದು ದಾಖಲೆ ಸಲ್ಲಿಸಿ ಅಲಿಬಾಗ್ ನಲ್ಲಿ ಜಾಗ ಖರೀದಿಸಿದ್ದ ಶಾರೂಖ್ ಖಾನ್, ಅಲ್ಲಿ ದೊಡ್ಡದೊಂದು ಬಂಗಲೆ, ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್ ಹೊಂದಿದ್ದು, 19,960 ಚದುರ ಮೀಟರ್ ಜಾಗ ಖಾಸಗಿಗಾಗಿ ಬಳಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಜಾಗದಲ್ಲಿ 1991ಕ್ಕಿಂತಲೂ ಮೊದಲೇ ಬಂಗಲೆ ಇತ್ತು ಎಂದು ಸಾಬೀತುಪಡಿಸಲು ಸಹ ಶಾರೂಖ್ ಖಾನ್ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆದರೆ ಗೂಗಲ್ ಅರ್ಥ್ ಫೋಟೋಗಳ ಪ್ರಕಾರ 2003ರಲ್ಲೂ ಈ ಜಾಗದಲ್ಲಿ ಬಂಗಲೆ ಇರಲಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ ಶಾರೂಖ್ ಒಡೆತನದ ದೇಜಾ ವು ಫಾರ್ಮ್ಸ್ ಕಂಪನಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿ, ತನಿಖೆ ಮಾಡುತ್ತಿದ್ದಾರೆ.
Leave A Reply