ವಿದ್ಯಾರ್ಥಿಗಳಿಗೆ ಮೋದಿ ಮೇಷ್ಟ್ರು ಬರೆದ ಪುಸ್ತಕದಲ್ಲಿ ಯಾವ ಸೂತ್ರಗಳಿವೆ ತಿಳಿದಿದೆಯೇ?
ದೆಹಲಿ: ಪ್ರಧಾನಿ ಮೋದಿ ಅವರು ಎಂದರೇನೆ ಹಾಗೆ. ಅವರು ಸೂಟು, ಬೂಟು ಹಾಕಿಕೊಂಡ ವಿದೇಶಕ್ಕೆ ಹೊರಟರೆ ಅವರನ್ನು ಸ್ವಾಗತಿಸಲು ವಿಶ್ವವೇ ತುದಿಗಾಲಲ್ಲಿ ಕಾಯುತ್ತಿರುತ್ತದೆ. ಭಾರತದ ಯಾವ ಮೂಲೆಗೆ ಅವರು ಹೋದರೂ ಲಕ್ಷ ಲಕ್ಷ ಜನ ಸೇರುತ್ತಾರೆ. ಅವರು ಮಾತನಾಡಲು ಹೊರಟರೆ ಇಡೀ ಸಂಸತ್ತು ಮೂಕವಿಸ್ಮಿತವಾಗಿ ಕೂರುತ್ತದೆ.
ಇಂತಿಪ್ಪ ನರೇಂದ್ರ ಮೋದಿ ಈಗ ಮೇಷ್ಟ್ರಾಗಿ ಬದಲಾಗಿದ್ದಾರೆ. ಹಾಗಂತ ಅವರು ಯಾವುದೋ ಶಾಲೆ ಅಥವಾ ಕಾಲೇಜಿಗೆ ಹೋಗಿ ಉಪನ್ಯಾಸ ನೀಡಿಲ್ಲ. ಬದಲಾಗಿ ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಪೋಷಕರಿಗಾಗಿ ಪ್ರಧಾನಿ ಅವರು ಪುಸ್ತಕ ಬರೆದಿದ್ದಾರೆ.
ಪ್ರಧಾನಿ ಬರೆದ ಪುಸ್ತಕವನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಎಂಬ ಪ್ರಕಾಶವವೊಂದು ಪ್ರಕಟಿಸಿದ್ದು, ಶನಿವಾರ ದೆಹಲಿಯಲ್ಲಿ ಪುಸ್ತಕ ಬಿಡುಗಡೆಯಾಗಿದೆ. ಹಾಗಾದರೆ ಮೋದಿ ಅವರು ಬರೆದ ಪುಸ್ತಕದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಯಾವ ಸಲಹೆ ನೀಡಿದ್ದಾರೆ? ಅವೆಷ್ಟು ಇಬ್ಬರಿಗೂ ಸಹಕಾರಿ? ಆ ಸರಳ ಸಲಹೆಗಳು ಯಾವವು? ಇಲ್ಲಿದೆ ಕಿರುಮಾಹಿತಿ.
ಎಕ್ಸಾಮ್ ವಾರಿಯರ್ ಎಂಬ ಪುಸ್ತಕದ ಮೊದಲ 25 ಚಾಪ್ಟರ್ ಗಳಲ್ಲಿ ವಿದ್ಯಾರ್ಥಿಗಳು ಹೇಗೆ ಪರೀಕ್ಷೆಗೆ ಸಿದ್ಧರಾಗಬೇಕು? ಪರೀಕ್ಷೆ ಭಯ ಹೇಗೆ ತೊಲಗಿಸಬೇಕು ಎಂದು ವಿವರಿಸಿದ್ದಾರೆ. “ಪರೀಕ್ಷೆಗಳು ಹಬ್ಬಗಳಿದ್ದಂತೆ-ಅವುಗಳನ್ನು ಆಚರಿಸಿ”, “ನೀವೇ ನಿಮ್ಮ ನಿರೂಪಕರಾಗಿ, ನಿಮ್ಮ ಶಕ್ತಿ ಸಾಬೀತುಪಡಿಸಿ”, “ಇದು ನಿಮ್ಮ ಸಾಮರ್ಥ್ಯ ತೋರಿಸುವ ಸುಸಮಯ, ಖುಷಿಯಿಂದ ಎದುರಿಸಿ”, “ಪರೀಕ್ಷೆಯಲ್ಲಿ ಚೀಟಿ ಮಾಡುವುದು ಸಣ್ಣತನದ ಕೆಲಸ” ಎಂಬ ಅಧ್ಯಾಯಗಳು ಮಕ್ಕಳಿಗೆ ಸೂಕ್ತ ಸಲಹೆಗಳಾಗುವುದರಲ್ಲಿ ಎರಡು ಮಾತಿಲ್ಲ.
ಅಷ್ಟೇ ಅಲ್ಲ, “ಪರೀಕ್ಷೆಯಲ್ಲಿ ನಿರೂಪಣೆ ಎಂಬುದು ಪ್ರಮುಖ ಪಾತ್ರ, ಅದನ್ನು ನಿರ್ವಹಿಸಿ”, “ನಿರೂಪಣೆ ಚೆನ್ನಾಗಿದ್ದರೆ, ಚೆನ್ನಾಗಿ ಪರೀಕ್ಷೆ ಬರೆದರೆ, ನಿಮ್ಮ ಕೇಕಿನ ಮೇಲೆ ಐಸಿನ ತುಣುಕು ಜೋಡಿಸಿದಂತೆ, ಸಿಹಿಯಾಗಿರುತ್ತದೆ, ಮಜವಾಗಿರುತ್ತದೆ” ಎಂಬ ಅಧ್ಯಾಯಗಳು ಮಕ್ಕಳಿಗೆ ಸಹಕಾರಿಯಾಗುತ್ತವೆ.
ಜತೆಗೆ ಪೋಷಕರಿಗೂ ಸಹ ಪ್ರಧಾನಿಯವರು ಸಲಹೆ ನೀಡಿದ್ದು, ವಿದ್ಯಾರ್ಥಿಗಳ ಮೇಲೆ ಓದು, ಓದು ಎಂದು ಒತ್ತಡ ಹೇರಬೇಡಿ, ಅವರ ಆಸಕ್ತಿಗೆ ನೀರೆರೆಯಿರಿ, ಭಾರತ ಅವಕಾಶಗಳ ಸಾಗರ, ಅವರ ಪ್ರತಿಭೆ ಅನಾವರಣಕ್ಕೆ ಏಣಿಯಾಗಿ ಎಂದು ಮೋದಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ಎಂದರೆ ಯಾವಾಗಲೂ ಬ್ಯುಸಿಯಾಗಿರುತ್ತಾರೆ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ವಿರೋಧ ಪಕ್ಷಗಳಿಗೆ ಟಾಂಗ್ ನೀಡುತ್ತಾರೆ, ರಾಜಕಾರಣವನ್ನಷ್ಟೇ ಮಾಡುತ್ತಾರೆ ಎಂಬ ಮಾತುಕೇಳಿಬರುತ್ತಿರುವ ಪ್ರಸ್ತುತದ ಸನ್ನಿವೇಶದಲ್ಲಿ ದೇಶದ ಪ್ರಧಾನಿಯೊಬ್ಬರು ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದು ಸಲಹೆ ನೀಡಿದ್ದು ಒಳ್ಳೆಯ ಬೆಳವಣಿಗೆ. ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕದಿಂದ ಒಳ್ಳೆಯದಾಗಲಿ ಎಂಬುದೇ ನಮ್ಮ ಆಶಯ.
Leave A Reply