ಆಪ್ ನ 20 ಶಾಸಕರ ಅಮಾನತು ಬಳಿಕ ಮತ್ತೊಬ್ಬ ಆಪ್ ಸಚಿವರಿಗೆ ಸಿಬಿಐನಿಂದ ಕುತ್ತು, ಆಸ್ತಿಪತ್ರ ಜಪ್ತಿ
ದೆಹಲಿ: ಲಾಭದಾಯಕ ಹುದ್ದೆ ಹೊಂದಿದ ಆರೋಪದಲ್ಲಿ ದೆಹಲಿಯ 20 ಶಾಸಕರನ್ನು ರಾಷ್ಟ್ರಪತಿಯವರು ಅಮಾನತುಗೊಳಿಸಿದ್ದು ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಮುಜುಗರ ಉಂಟಾದ ಬೆನ್ನಲ್ಲೇ ಮತ್ತೊಂದು ಹಿನ್ನಡೆಯಾಗಿದ್ದು, ದೆಹಲಿ ಸರ್ಕಾರದ ಸಚಿವ, ಆಪ್ ಮುಖಂಡ ಸಂತ್ಯೇಂದರ್ ಜೈನ್ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳನ್ನು ಸಿಬಿಐ ಜಪ್ತಿ ಮಾಡಿದೆ.
ದೆಹಲಿಯ ಡೆಂಟಲ್ ಕೌನ್ಸಿಲ್ನ ಹಲವು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಸತ್ಯೇಂದರ್ ಜೈನ್ ಅವರಿಗೆ ಸಂಬಂಧಿಸಿ ಕೋಟ್ಯಂತರ ರುಪಾಯಿ ಮೌಲ್ಯದ ದಾಖಲೆ, ಆಸ್ತಿಪತ್ರ, ಚೆಕ್ ಬುಕ್ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸತ್ಯೇಂದರ್ ಜೈನ್ ವಿರುದ್ಧ ಇದ್ದ ಪ್ರಕರಣವೊಂದರ ತನಿಖೆ ವೇಳೆ ದಾಖಲೆ ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಸಿಬಿಐ ಅಧಿಕಾರಿಗಳು ಜೈನ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಭ್ರಷ್ಟಾಚಾರ ಹಾಗೂ ಹವಾಲ ದಂಧೆಯಲ್ಲಿ ಭಾಗಿಯಾದ ಆರೋಪದಲ್ಲಿ ಸತ್ಯೇಂದರ್ ಜೈನ್ ವಿರುದ್ಧ ಮೂರು ಪ್ರಕರಣ ದಾಖಲಾಗಿದ್ದು, ತನಿಖೆ ಎದುರಿಸುತ್ತಿದ್ದಾರೆ.
2010-12 ಹಾಗೂ 2015-16ನೇ ಸಾಲಿನಲ್ಲಿ ಸತ್ಯೇಂದರ್ ಜೈನ್ ಎರಡು ಪ್ರತ್ಯೇಕ ಕಂಪನಿಗಳಿಗೆ 11.78 ಹಾಗೂ 4.63 ಕೋಟಿ ರೂ. ಹವಾಲ ದಂಧೆ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಸಿಲುಕಿದ್ದಾರೆ. ಆದಾಗ್ಯೂ ಸಿಬಿಐ ದಾಳಿಯನ್ನು ಆಪ್ ತಿರಸ್ಕರಿಸಿದ್ದು, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದೆ.
Leave A Reply