ನನಗೆ ಗೊತ್ತೆ ಇರಲಿಲ್ಲ ಎಂದಿರುವ ಸಿದ್ದು ಉಡುಪಿಯನ್ನು ಮರೆತಿರಬಹುದು, ನಾವು ಮರೆತಿಲ್ಲ!!
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಮ್ಮೆ ಯೂಟರ್ನ್ ಹೊಡೆದಿದ್ದಾರೆ. ಇತ್ತೀಚೆಗೆ ಬಾವಿಗೆ ಕಲ್ಲು ಬಿಸಾಡಿ ಆಳ ನೋಡುವ ಅವರ ಶೈಲಿ ಮತ್ತೊಮ್ಮೆ ಪುನರಾರ್ವತನೆಗೊಳ್ಳುತ್ತಿದೆ. ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಆದರೂ ಅವರ ಆಪ್ತರು ಗಮನಿಸುತ್ತಿರುವ ಪ್ರಕಾರ ಇದು ಅಲ್ಪಸಂಖ್ಯಾತರಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಬಗ್ಗೆ ಕಾನ್ಫಿಡೆನ್ಸ್ ಹೆಚ್ಚಿಸುತ್ತಿರುವ ಹೆಜ್ಜೆಗಳೆಂದು ಹೇಳಲಾಗುತ್ತಿದೆ. ತಾವು ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಏನು ಮಾಡಲಿದ್ದೇವೆ ಎನ್ನುವುದರ ಝಲಕ್ ಇದು ಎಂದೇ ಅಲ್ಪಸಂಖ್ಯಾತ ಘಟಕದ ಕಾಂಗ್ರೆಸ್ಸಿಗರ ಅನಿಸಿಕೆ. ಸಿದ್ಧರಾಮಯ್ಯ ಅವರಿಗೆ ತಾವು ಈ ಸಲ ಏನು ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟರೂ ಅಲ್ಪಸಂಖ್ಯಾತರು ನಂಬಲ್ಲ ಎನ್ನುವುದು ಗೊತ್ತಾಗಿದೆ. ಅಲ್ಪಸಂಖ್ಯಾತರು ನಿರ್ಣಾಯಕರಾಗಿರುವ ಕ್ಷೇತ್ರಗಳಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಗೆಲ್ಲದಿದ್ದರೂ ಜೆಡಿಎಸ್ ಗೆಲ್ಲಬಹುದು ಎಂದು ಅವರಿಗೆ ಆಂತರಿಕ ಸಮೀಕ್ಷೆಗಳು ಹೇಳಿವೆ. ಇನ್ನೊಂದು ಕಡೆಯಲ್ಲಿ ಮೋದಿ-ಅಮಿತ್ ಶಾ ಜೋಡಿ ಕರ್ನಾಟಕದಲ್ಲಿ ಎಸೆಯುತ್ತಿರುವ ದಾಳಕ್ಕೆ ಯಡಿಯೂರಪ್ಪನವರ ಮುಖ ನೋಡಿ ಅಲ್ಲದಿದ್ದರೂ ಶಾ-ಮೋದಿ ಮುಖ ನೋಡಿ ಪ್ರಜ್ಞಾವಂತ ಮತದಾರ ಬಿಜೆಪಿ ಕೈಯಲ್ಲಿ ಅಧಿಕಾರ ಕೊಡೋಣ ಎಂದು ತೀರ್ಮಾನಿಸಿಬಿಟ್ಟಿರುವುದು ಅವರಿಗೆ ಗೊತ್ತಿದೆ. ಅದರ ನಡುವೆ ಹಿಂದೂ ಸಂಘಟನೆಗಳ ಹುಡುಗರು ಈ ಬಾರಿ ತಮ್ಮ ಓರಗೆಯ ಯುವಕರ ಹತ್ಯೆಗಳಿಗೆ ಮತದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸುವ ಮೂಲಕ ಪ್ರತೀಕಾರ ತೀರಿಸಲಿದ್ದಾರೆ ಎನ್ನುವುದರ ಅರಿವು ಸಿದ್ಧರಾಮಯ್ಯ ಅವರಿಗೆ ಇದೆ. ಈ ಹಂತದಲ್ಲಿ ಕಾಂಗ್ರೆಸ್ಸನ್ನು ಅನಾಥವಾಗಿ ಸಮುದ್ರದ ಮಧ್ಯೆ ಬಿಟ್ಟು ವರುಣಾ ಕ್ಷೇತ್ರದಲ್ಲಿ ಕಾಲು ಚಾಚಿ ಮಲಗಿದರೆ ಸೋನಿಯಾ, ರಾಹುಲ್ ಐದು ವರ್ಷ ತನ್ನನ್ನು ಏನು ಬೇಕಾದರೂ ಮಾಡು ಎಂದು ಬಿಟ್ಟುಬಿಟ್ಟದ್ದಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಗೊತ್ತಿರುವ ಕಾರಣ ಸಿದ್ಧರಾಮಯ್ಯ ತನ್ನ ಬತ್ತಳಿಕೆಯಲ್ಲಿರುವ
ಟ್ರೇಲರ್ ಗಳನ್ನು ಅಲ್ಪಸಂಖ್ಯಾತರಿಗೆ ತೋರಿಸಿ ಆ ಮತಬ್ಯಾಂಕ್ ಗಟ್ಟಿ ಮಾಡಲು ಸಿಮೆಂಟ್ ಮತ್ತು ಮರಳು ಕಲೆಸಿಕೊಳ್ಳುತ್ತಿದ್ದಾರೆ.
ನನಗೆ ಗೊತ್ತೆ ಇರಲಿಲ್ಲ…
ಆದರೆ ಯಾವಾಗ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಕಾಂಗ್ರೆಸ್ ಶಾಸಕರ ಮುಂದೆನೆ ಸಿಎಂಗೆ ತಿರುಗೇಟು ಕೊಟ್ಟರೋ, ಹಿರಿಯ ಪೇಜಾವರ ಶ್ರೀಗಳು ತಾವು ಮಠ ಬಿಟ್ಟು ಹೋಗುತ್ತೇವೆ, ಸರಕಾರದ ಸಿಬ್ಬಂದಿಯಾಗುವುದಿಲ್ಲ ಎಂದರೋ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೋ ಸಿದ್ಧರಾಮಯ್ಯನವರಿಗೆ ವಿಷಯ ಮನದಟ್ಟಾಯಿತು. ತಾನು ಹೀಗೆ ಹಟ ಮಾಡಿದರೆ ಗೆಲ್ಲುವುದು ಬಿಡಿ, ಡೆಪಾಸಿಟ್ ಹಿಂದಕ್ಕೆ ತೆಗೆದುಕೊಳ್ಳಲು ಹೋದರೆ ಯಾವನಯ್ಯಾ ನೀನು, ಮುಂದೆ ಹೋಗು ಎಂದು ಭಿಕ್ಷುಕನಿಗೆ ಅಟ್ಟಿದಂತೆ ತನ್ನ ಗುರುತು ಕೂಡ ಸಿಗದಷ್ಟು ರೀತಿಯಲ್ಲಿ ತನ್ನನ್ನು ಸೋಲಿಸಿಬಿಡುತ್ತಾರೆ ಎಂದು ಗ್ಯಾರಂಟಿಯಾಗಿದೆ. ಅದಕ್ಕೆ ಸಿದ್ದು ಹೊಸ ವರಸೆ ಶುರು ಮಾಡಿದ್ದಾರೆ. ನನಗೆ ಗೊತ್ತೆ ಇರಲಿಲ್ಲ!
ಒಂದು ರಾಜ್ಯದ ಮುಖ್ಯಮಂತ್ರಿಗೆ ತನ್ನ ಬೇರೆ ಇಲಾಖೆಗಳಲ್ಲಿ ನಡೆಯುವ ಪ್ರತಿಯೊಂದು ಪತ್ರ ವ್ಯವಹಾರ ಗೊತ್ತಿರಲೇ ಬೇಕೆಂದಿಲ್ಲ. ಆದರೆ ಆ ಇಲಾಖೆಯ ಮಂತ್ರಿಗೆ ಗೊತ್ತಿಲ್ಲದೆ ಇಂತಹ ಸುತ್ತೋಲೆ ಹೊರಬರಲು ಸಾಧ್ಯವೇ ಇಲ್ಲ. ಮಂತ್ರಿಗೆ ಗೊತ್ತಾದ ಕೂಡಲೇ ತಾವು ಕಳುಹಿಸುತ್ತಿರುವ ಸುತ್ತೋಲೆ ತಮ್ಮದೇ ಸರಕಾರದ ಡೆತ್ ಸರ್ಟಿಫಿಕೇಟ್ ತರಹ ಇದೆಯಲ್ಲ ಎಂದು ಅರಿವಿಗೆ ಬರದೇ ಇರಲ್ಲ. ಅಂತಹ ನೋಟಿಸ್ ಇದು. ಹಾಗೆ ಗೊತ್ತಾದ ಕೂಡಲೇ ಆ ಮಂತ್ರಿ ಖಂಡಿತವಾಗಿಯೂ ರಾತ್ರಿ ನಿದ್ರೆ ಮಾಡದಿದ್ದರೂ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಸಿಎಂ ಅಧಿಕೃತ ನಿವಾಸದ ಹೊರಗೆ ಕುಕ್ಕರಗಾಲಿನಲ್ಲಿ ಕುಳಿತು ಕಾದು ಸಿಎಂಗೆ ಹೇಳಿಯೇ ಮುಂದುವರೆಯುತ್ತಾರೆ. ಇಲ್ಲಿ ಕೂಡ ಹಾಗೆ ಆಗಿರಬಹುದು. ಆದರೆ ಸಿದ್ಧರಾಮಯ್ಯ ಸ್ಟೈಲ್ ನಮಗೆ ಗೊತ್ತೆ ಇದೆ. ಯಾರು ಏನೇ ಹೇಳಿದರೂ “ಏ ಬಿಡಯ್ಯ, ಅದೇನ್ ಆಗುತ್ತೆ, ಕಳಿಸೋ, ನೋಡೆ ಬಿಡೋಣ” ಎಂದು ಹೇಳಿರುವ ಸಾಧ್ಯತೆ ಇದೆ. ಒಂದು ವೇಳೆ ವಿವಾದ ಆದ್ರೆ ಹಿಂದಕ್ಕೆ ಪಡೆದುಕೊಳ್ಳುವುದು, ಅಲ್ಪಸಂಖ್ಯಾತರಿಗೆ ಸಂದೇಶ ಕಳುಹಿಸುವುದು. ವಿವಾದ ಆಗದಿದ್ದರೆ ತಾವು ಏನು ಮಾಡಿದರೂ ಹಿಂದೂಗಳು ಏನು ಮಾತನಾಡುವುದಿಲ್ಲ ಎಂದು ಅಲ್ಪಸಂಖ್ಯಾತರನ್ನು ಹಿಂದೆಯಿಂದ ಕರೆಸಿ ಖುಷಿಪಡಿಸುವುದು. ಮೊನ್ನೆ ಸಚಿವ ಯುಟಿ ಖಾದರ್ ಅವರ ಬೆಂಗಳೂರು ನಿವಾಸದಲ್ಲಿ ರಾಜ್ಯ ಮುಸ್ಲಿಂ ಮುಖಂಡರೊಂದಿಗೆ ತಡರಾತ್ರಿಯ ತನಕ ಊಟ, ಸಮಾಲೋಚನೆ ಮಾಡಿ ಬಂದಿರುವ ಸಿಎಂ ಮ್ಯಾಚ್ ಎಂಡ್ ಆಗುವ ಒಳಗೆ ವಿನ್ ಆಗಲು ಬ್ಯಾಟ್ ಯದ್ವಾತದ್ವಾ ಬೀಸಬೇಕು ಎಂದು ನಿರ್ಧರಿಸಿಬಿಟ್ಟಿದ್ದಾರೆ.
ಆವತ್ತು ಉಡುಪಿ ಮಠದ ವಿಷಯದಲ್ಲಿ ಏನು ಮಾಡಿದ್ರಿ…
ತನಗೆ ಇಂತಹ ಸುತ್ತೋಲೆ ಹೊರಡಿಸಿದ್ದರ ಬಗ್ಗೆ ಗೊತ್ತೆ ಇರಲಿಲ್ಲ ಎಂದು ಸಾರ್ವಜನಿಕರ ಕಿವಿಯ ಮೇಲೆ ಲಾಲ್ ಭಾಗಿನ ಒಂದೊಂದು ಗುಲಾಬಿ ಇಟ್ಟು ಚೆಂದ ನೋಡುತ್ತಿರುವ ಸಿದ್ಧರಾಮಯ್ಯನವರು ತಾವು ಮೂರು ವರ್ಷಗಳ ಹಿಂದೆ ಹಟ ಮಾಡಿದ್ದ ಒಂದು ವಿಷಯ ಮರೆತಿರಬಹುದು. ಆದರೆ ಕರಾವಳಿಯ ಜನ ಮರೆತಿಲ್ಲ. ಸಿದ್ದು ಶತಾಯಗತಾಯ ಉಡುಪಿ ಶ್ರೀಕೃಷ್ಣ ಮಠವನ್ನು ತಮ್ಮ ಸರಕಾರದ ಸುಪದ್ಧಿಗೆ ತರಬೇಕು ಎಂದು ಪ್ರಯತ್ನಪಟ್ಟಿದ್ದರು. ಆದರೆ ಶ್ರೀಕೃಷ್ಣ ಭಗವಂತ ಸಿದ್ದು ಕೈಗೆ ಹೋಗಲು ಬಯಸಲೇ ಇಲ್ಲ. ಶ್ರೀಕೃಷ್ಣಮಠವನ್ನು ತನ್ನ ತೆಕ್ಕೆಗೆ ತೆಗೆದು ಬೀಗಬೇಕೆಂದಿದ್ದ ಸಿದ್ಧರಾಮಯ್ಯ ಆವತ್ತಿನಿಂದ ಇವತ್ತಿನ ತನಕ ಅದಕ್ಕೆ ಏನು ಪ್ರಯತ್ನ ಮಾಡಿಲ್ಲ ಎನ್ನುವುದೂ ಒಂದೇ, ಸಿದ್ಧರಾಮಯ್ಯ ಮುಂದಿನ ಬಾರಿ ಚುನಾವಣೆಗೆ ನಿಲ್ಲಲ್ಲ ಎಂದು ಹೇಳುವುದು ಒಂದೇ. ಒಂದೋ ಸಿದ್ಧರಾಮಯ್ಯ ಇಂತಹ ನಡೆಗಳನ್ನು ಮಾಡಿ ನಾಡಿದ್ದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುವಾಗ ಕಾಂಗ್ರೆಸ್ಸ್ ಎಲ್ಲಿದೆ ಎಂದು ಹುಡುಕುವ ಹಾಗೆ ಮಾಡುತ್ತಾರೆ ಅಥವಾ ಸಿದ್ದುವಿನ ಅಹಂಕಾರದಿಂದ ಬೇಸತ್ತ ಕಾಂಗ್ರೆಸ್ಸಿಗರು ಸಿದ್ದುವಿಗೆ ಗೊತ್ತಾಗದೇ ಗುಂಡಿ ತೋಡಿ ಮಣ್ಣು ಮುಚ್ಚಿ “ಸಿದ್ಧರಾಮಯ್ಯ ಹಮ್ ಕೋ ಚೋಡ್ ಕೆ ಚಲ್ ಗಯೇ” ಎಂದು ರಾಹುಲ್ ಗಾಂಧಿಗೆ ಹೇಳಿ ಕಥೆ ಕ್ಲೋಸ್ ಮಾಡುತ್ತಾರೆ!!
Leave A Reply