ವಿದ್ಯಾರ್ಥಿಗಳ ಪರೀಕ್ಷಾ ಭಯ ತೊಲಗಿಸಲು ಮೋದಿ ಅವರ ನೂತನ “ಪರೀಕ್ಷಾ ಪೆ ಚರ್ಚಾ”
ದೆಹಲಿ: ಬರೀ ಚುನಾವಣೆ, ರ್ಯಾಲಿ, ಸಂಸತ್ ಕಲಾಪ, ವಿದೇಶ ಪ್ರವಾಸ ಎಂದು ಪ್ರಧಾನಿ ಮೋದಿ ಅವರು ಕಾರ್ಯನಿರ್ತರಾಗಿರುವ ಮಧ್ಯೆಯೂ ಜನರತ್ತ ಹೋಗುವುದನ್ನು ಮಾತ್ರ ಮರೆಯುವುದಿಲ್ಲ. ಇದುವರೆಗೆ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರವಾಗಿದ್ದ ಪ್ರಧಾನಿ, ಇತ್ತೀಚೆಗೆ ಎಕ್ಸಾಂ ವಾರಿಯರ್ಸ್ ಎಂಬ ಪುಸ್ತಕ ಬರೆದು ವಿದ್ಯಾರ್ಥಿಗಳ ಆತಂಕ ತೊಲಗಿಸುವಲ್ಲಿ ಸಹಕಾರಿಯಾಗಿದ್ದರು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ನರೇಂದ್ರ ಮೋದಿ ಅವರು, ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ “ಪರೀಕ್ಷಾ ಪೆ ಚರ್ಚೆ” ಎಂಬ ವಿನೂತನ ಹಾಗೂ ಎಲ್ಲ ರಾಜಕಾರಣಿಗಳಿಗೆ ಮಾದರಿಯಾಗುವ ಕಾರ್ಯಕ್ರಮ ಆಯೋಜಿಸಿದ್ದಾರೆ.
ಹೌದು, ದೇಶದ ಸಾವಿರಾರು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಫೆ.16ರಂದು ದೆಹಲಿಯ ತಲ್ಕಾತೋರಾ ಸ್ಟೇಡಿಯಂನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ವಿದ್ಯಾರ್ಥಿಗಳ ಪರೀಕ್ಷಾ ಭಯ, ಇರುವ ಆತಂಕ, ಹೇಗೆ ಓದಬೇಕು ಎಂಬುದು ಸೇರಿ ಹಲವು ವಿಷಯಗಳ ಕುರಿತು ಮೋದಿ ಅವರು ಮಾತನಾಡಲಿದ್ದು, 6-12ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ದೂರದರ್ಶನ, ಯೂ ಟ್ಯೂಬ್ ಮತ್ತು ಸರ್ಕಾರದ ಎಲ್ಲ ವೆಬ್ ಸೈಟ್ ಗಳಲ್ಲಿ ಮೋದಿ ಅವರ ಲೈವ್ ವೀಡಿಯೋ ಕಾನ್ಫರೆನ್ಸ್ ಪ್ರಸಾರವಾಗಲಿದೆ.
ವೀಡಿಯೋ ಕಾನ್ಫರೆನ್ಸ್ ಆದ ಮರುದಿನ, ಮೋದಿ ಅವರ ಪಾಠ ಕೇಳಿದ ಕುರಿತ ಫೋಟೋ ಅಥವಾ ಎರಡು ನಿಮಿಷದ ವೀಡಿಯೋ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಲಾಗಿದೆ.
Leave A Reply