ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಫೋನಿನಲ್ಲಿ ಮಾತುಕತೆ, ಹಲವು ವಿಷಯಗಳ ಚರ್ಚೆ
ದೆಹಲಿ/ವಾಷಿಂಗ್ಟನ್: ಪಾಕಿಸ್ತಾನದ ಭಯೋತ್ಪಾದನೆ ಪೋಷಣೆ ವಿರುದ್ಧ ಅಮೆರಿಕ ಟೀಕಿಸಿರುವ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನಿನಲ್ಲಿ ಮಾತನಾಡಿದ್ದು, ಹಲವು ವಿಷಯ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಎರಡೂ ರಾಷ್ಟ್ರಗಳ ನಾಯಕರು ಪ್ರಮುಖವಾಗಿ ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ನಿಯಮಗಳನ್ನು ಗೌರವಿಸಬೇಕು ಎಂಬ ನಿಲುವನ್ನು ಇಬ್ಬರೂ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ.
2018ರಲ್ಲಿ ಇಬ್ಬರೂ ನಾಯಕರು ಇದೇ ಮೊದಲ ಬಾರಿಗೆ ಫೋನಿನಲ್ಲಿ ಮಾತನಾಡಿದ್ದು, ದಕ್ಷಿಣ ಏಷ್ಯಾದ ಅಭಿವೃದ್ಧಿಗೆ ಟ್ರಂಪ್ ಸಹಕಾರ, ಅಫ್ಗಾನಿಸ್ತಾನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಉಭಯ ನಾಯಕರ ಬದ್ಧತೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಉಭಯ ರಾಷ್ಟ್ರಗಳ ಆರ್ಥಿಕ ಸಹಕಾರ ಹಾಗೂ ಏಳಿಗೆಯ ದೃಷ್ಟಿಯಿಂದ ಮುಂದಿನ ಏಪ್ರಿಲ್ ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಭಾರತದ ಇಬ್ಬರು ಹಾಗೂ ಅಮೆರಿಕದ ಇಬ್ಬರು ವಕ್ತಾರರ ಮಧ್ಯೆ ಸಚಿವಾಲಯ ಮಟ್ಟದ ಮಾತುಕತೆ ನಡೆಸಲು ಇಬ್ಬರೂ ಮುಖಂಡರು ಒಪ್ಪಿಗೆ ಸೂಚಿಸಿರುವುದು ಮಾತುಕತೆಯ ಮಹತ್ತರ ಬೆಳವಣಿಗೆಯಾಗಿದೆ.
ಇದರ ಜತೆಗೆ ಉಭಯ ರಾಷ್ಟ್ರಗಳ ಪರಸ್ಪರ ಸಹಕಾರ, ರೋಹಿಂಗ್ಯಾ ಮುಸ್ಲಿಮರು, ಜಾತಿಕ ಭಯೋತ್ಪಾದನೆ, ವಿಶ್ವ ಶಾಂತಿ ಸೇರಿ ಹಲವು ವಿಷಯಗಳನ್ನು ಮೋದಿ ಹಾಗೂ ಟ್ರಂಪ್ ಚರ್ಚಿಸಿದ್ದಾರೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
Leave A Reply