ಮಲಿನ ನಂದಿನಿ ಮಡಿಯಾಗಿ ಸ್ವಚ್ಛ ನಂದಿನಿಯಾದಳು!
Posted On February 11, 2018
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲವನ್ನು ಬಳಸಿ ಹರಿಯುವ ನಂದಿನೀ ನದಿಯನ್ನು ಸ್ವಚ್ಛಗೊಳಿಸೋಣ ಎಂಬ ಯುವಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರ ಕರೆಯಂತೆ ಭಾನುವಾರ ಕಟೀಲಿನಲ್ಲಿ ನಂದಿನೀ ನದಿಯನ್ನು ಐನೂರಕ್ಕೂ ಹೆಚ್ಚು ಮಂದಿ ಸ್ವಚ್ಛಗೊಳಿಸಿದರು.
ಕಟೀಲು ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪರಿಸರದ ಯುವಕ ಯುವತಿಯರು, ಯುವ ಬ್ರಿಗೇಡ್‌ನ ಕಾರ್ಯಕರ್ತರು ಸ್ವಚ್ಛನಂದಿನಿ ಘೋಷಣೆಯಡಿ ನಡೆದ ನದಿಯ ಸ್ವಚ್ಛತೆಯಲ್ಲಿ ಪಾಲ್ಗೊಂಡು ಪುನೀತರಾದರು. ದೂರದ ಬೆಂಗಳೂರಿನಿಂದಲೇ ೧೫ರಷ್ಟು ಮಂದಿ ಬಂದಿದ್ದರು. ಮೂಡುಬಿದ್ರೆ, ಮಂಗಳೂರುಗಳಿಂದಲೂ ನದಿಸ್ವಚ್ಚತೆಗೆಂದು ಕಾರ‍್ಯಕರ್ತರು ಬೆಳಿಗ್ಗೆ ಆರು ಗಂಟೆಗೇ ಹಾಜರಿದ್ದರು.
ವೀಡಿಯೋ- https://youtu.be/byBy7shxlHk
ವಗ್ಗ ಪಂಚಾಯತ್ ಅಧ್ಯಕ್ಷ ಪ್ರಮೋದ್ ರೈ ಕುಟುಂಬ ಸಹಿತ ಭಾಗವಹಿಸಿದ್ದರು. ಯುವಬ್ರಿಗೇಡ್‌ನ ರಾಜ್ಯಸಂಚಾಲಕ ಚಂದ್ರಶೇಖರ್, ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ, ವಿಕ್ರಂ ನಾಯಕ್, ಮಂಜಯ್ಯ ಜೈನ್, ಸತೀಶ್ ಶಶಿ, ಸ್ವಾತಿ ರೈ, ನಿರಂಜನ್ ತಲ್ಲೂರು, ಸೇರಿದಂತೆ ಕೇಶವ ಕಟೀಲ್, ನಾಗರಾಜ ಕೊಡೆತ್ತೂರು, ಅಭಿಲಾಷ್ ಶೆಟ್ಟಿ, ಗುರುರಾಜ್ ಮುಂತಾದ ಅನೇಕರು ನದಿಯಿಂದ ಕಸಹೆಕ್ಕುವ ಕೆಲಸದಲ್ಲಿ ತೊಡಗಿಸಿಕೊಂಡರು.
ಏಳು ಲೋಡುಗಳಷ್ಟು ಕಸ, ಪ್ಲಾಸ್ಟಿಕ್, ಬಟ್ಟೆಚೂರು, ಫೋಟೋಫ್ರೇಮು, ಕಳೆಗಿಡಗಳನ್ನು ನದಿಯಿಂದ ತೆಗೆದು ಕಾಳಜಿ ವ್ಯಕ್ತಪಡಿಸಿದರು. ಈ ಬಾರಿ ಕಟೀಲು ದೇಗುಲ ಪರಿಸರದಲ್ಲಿ ಸ್ವಚ್ಛತೆ ನಡೆದಿದೆ. ಜನಜಾಗೃತಿ ಅಗತ್ಯವಿದೆ. ನದಿಯ ಉಳಿದೆಡೆಯೂ ಸ್ವಚ್ಛತಾ ಕೆಲಸಕ್ಕೆ ಇದು ಸ್ಪೂರ್ತಿಯಾಗಬೇಕೆಂಬ ಕಳಕಳಿ ನಮ್ಮದು ಎಂದು ಮಂಗಲ್ಪಾಡಿ ನರೇಶ್ ಶೆಣೈ ಹೇಳಿದರು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂ, ಈಶ್ವರ ಕಟೀಲ್, ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಪರಮೇಶ್ವರ್, ಸಾಯಿನಾಥ ಶೆಟ್ಟಿ, ದೇವಪ್ರಸಾದ ಪುನರೂರು ಮುಂತಾದವರು ಕಾರ‍್ಯಕರ್ತರನ್ನು ಪ್ರೋತ್ಸಾಹಿಸಿದರು.
ದೇವರನ್ನೂ ಬಿಸಾಡಿದರು!
ದೇವಿ, ಹನೂಮಂತ, ಸಾಯಿಬಾಬ, ಗಣಪತಿ, ಕೃಷ್ಣ ಹೀಗೆ ಅನೇಕ ದೇವರ ವಿಗ್ರಹಗಳೂ, ಗ್ಲಾಸು ಹಾಕಿದ ಫೋಟೋ ಫ್ರೇಮುಗಳೂ, ನದಿಗೇ ಹಾಕಿದ ಕಾಣಿಕೆ ದುಡ್ಡೂ ಹೀಗೆ ಭಕ್ತರು ನದಿ ಮತ್ತು ದೇವರ ಬಗ್ಗೆ ಯೋಚಿಸದೆ ಹಾಕಿದ್ದು, ನದಿಯ ಕಸದ ರಾಶಿಯಲ್ಲಿ ಸಿಕ್ಕವು. ದೇವರ ಮೂರ್ತಿ ಅಥವಾ ಫೋಟೋ ಹಳೆಯದಾದರೆ ಜ್ಯೋತಿಷಿಗಳ ಅಥವಾ ಮೂಢನಂಬಿಕೆಯಂತೆ ನದಿಯಲ್ಲಿ ವಿಸರ್ಜಿಸುತ್ತಾರೆ. ಇದು ಸರಿಯಲ್ಲ. ಕನ್ನಡಿ ಹಾಕಿದ ಫೋಟೋ ಫ್ರೇಮುಗಳನ್ನು ನದಿಗೆ ಹಾಕಿದರೆ, ಅದರಲ್ಲಿ ಮಿಂದು ಪಾವನರಾಗಲು ಬರುವ ಭಕ್ತರಿಗೇ ತಾಗಿ ಗಾಯಗಳಾಗಿ ಫೋಟೋ ಬಿಸಾಡಿದವರಿಗೆ ಪಾಪ ಬರುವುದೇ ಹೆಚ್ಚು. ಹಾಗಾಗಿ ದೇವರ ಮೂರ್ತಿ, ಫೋಟೋಗಳನ್ನು ನದಿಗೆ ಹಾಕಬೇಡಿ. ಬದಲಾಗಿ ದೇಗುಲದಲ್ಲೇ ಅದಕ್ಕೊಂದು ಸ್ಥಳ ನಿಗದಿ ಮಾಡಿ, ಅಲ್ಲಿ ವಿಸರ್ಜಿಸಿ. ಈ ಕಸವನ್ನು ನಾವು ವಿಲೇವಾರಿ ಮಾಡುತ್ತೇವೆ ಎನ್ನುತ್ತಿರುವಾಗಲೇ ಒಂದಿಬ್ಬರು ಭಕ್ತರು ಅಲ್ಲಿ ದೇವರ ಫೋಟೋ ಇಟ್ಟು ತೆರಳಿದರು! ಹತ್ತಾರು ಮಂದಿ ನೀರಿಗಿಳಿದು ಕಸಹೆಕ್ಕುತ್ತಿದ್ದಾಗಲೇ ಭಕ್ತರೊಬ್ಬರು ತಮ್ಮ ಮಕ್ಕಳಿಬ್ಬರ ಬೋಳಿಸಿದ ತಲೆಕೂದಲನ್ನು ನದಿಗೆಸೆದು ಪುಣ್ಯಸಂಪಾದನೆ ಮಾಡಿದ ಭ್ರಮೆಯಿಂದ ಹೋದರು. ಕಟೀಲಿನಲ್ಲಿ ಕೇಶಮುಂಡನ ಸೇವೆ ಇಲ್ಲದಿದ್ದರೂ ಭಕ್ತರು ಸ್ವತಃ ತಾವೇ ಜಾಗೃತರಾಗಿ ಕಟೀಲು ದೇವಿಯಷ್ಟೇ ನಂದಿನಿ ನದಿಯೂ ಪವಿತ್ರವಾದುದು. ತೀರ್ಥ ಎಂಬುದನ್ನು ಅರ‍್ಥೈಸಿಕೊಳ್ಳಬೇಕು ಎನ್ನುತ್ತಾರೆ ಕಟೀಲು ದೇಗುಲದ ಅರ್ಚಕರಾದ ಶ್ರೀಹರಿ ಆಸ್ರಣ್ಣ. ಯುವಬ್ರಿಗೇಡ್ ಕಾರ‍್ಯಕರ್ತರು ಹಾಗೂ ಸ್ಥಳೀಯರು ನಂದಿನಿ ನದಿಯಿಂದ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಸವನ್ನು ಮೇಲಕ್ಕಿತ್ತಿದ್ದಾರೆ. ರಾಜ್ಯಾದ್ಯಂತ ಯುವಬ್ರಿಗೇಡ್ ಮಾಡುತ್ತಿರುವ ನದಿಸ್ವಚ್ಛತಾ ಆಂದೋಲನ ಜನಜಾಗೃತಿಯನ್ನುಂಟು ಮಾಡಲಿ ಎಂದು ಶ್ರೀಹರಿ ಆಸ್ರಣ್ಣ ಹೇಳಿದರು.
ಬಸ್ಸಿನವರೇ ಹೂವು ಪ್ಲಾಸ್ಟಿಕ್ ಹಾಕಬೇಡಿ!
ಕಟೀಲು ಹಾದಿಯಲ್ಲಿ ದಿನಂಪ್ರತಿ ಹೋಗುವ ಬಸ್ಸು ಮುಂತಾದ ವಾಹನಗಳ ಚಾಲಕರು, ತಮ್ಮ ವಾಹನದ ದೇವರಿಗೆ ಹಾಕಿದ ಹೂವನ್ನು ಮರುದಿನ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ರೊಯ್ಯನೆ ನದಿಗೆ ಬಿಸಾಡಿ ನದಿಯನ್ನು ಹಾಳುಗೆಡಿಸುತ್ತಿದ್ದಾರೆ. ನದಿಗೆ ಪ್ಲಾಸ್ಟಿಕ್ ಹಾಕಬೇಡಿ ಎಂದು ನಮ್ಮಲ್ಲೇ ಜಾಗೃತಿ ಮೂಡಬೇಕಲ್ಲವೇ ಎನ್ನುವುದು ನದಿ ಸ್ವಚ್ಛತೆಯಲ್ಲಿ ತೊಡಗಿದ ಸ್ವಯಂಸೇವಕರಿಗೆ ಶರಬತ್ ವ್ಯವಸ್ಥೆ ಮಾಡಿದ ಪ್ರಶಾಂತ್ ಕಟೀಲು.
ವೀಡಿಯೋ- https://youtu.be/GtFNiBEuiok
- Advertisement -
Leave A Reply