ಜಮ್ಮು-ಕಾಶ್ಮೀರದಲ್ಲಿ ಸೈನಿಕರ ಬಲಪಡಿಸಲು 1487 ಕೋಟಿ ರುಪಾಯಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರ ದಾಳಿ, ನಿಯಮ ಉಲ್ಲಂಘನೆ ಜಾಸ್ತಿಯಾದ ಬೆನ್ನಲ್ಲೇ, ಕೇಂದ್ರ ಸರ್ಕಾರ ಭಾರತೀಯ ಸೈನಿಕರ ಬಲಪಡಿಸಲು ಬರೋಬ್ಬರಿ 1487 ಕೋಟಿ ರುಪಾಯಿ ಬಿಡುಗಡೆಗೊಳಿಸಿದೆ.
2016ರಲ್ಲಿ ಪಠಾಣ್ ಕೋಟ್ ದಾಳಿಯಾದ ಬಳಿಕ ಸೈನ್ಯದ ಲೆಕ್ಕಪರಿಶೋಧನೆಯ ಹೊಣೆಹೊತ್ತಿರುವ ಲೆಫ್ಟಿನೆಂಟ್ ಕರ್ನಲ್ ಫಿಲಿಪ್ ಅವರು ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಕೇಂದ್ರ ಸರ್ಕಾರ ಸೈನ್ಯಕ್ಕೆ ಅಪಾರ ಹಣ ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲ, ಹಣವನ್ನು ಸಂಪೂರ್ಣವಾಗಿ ವ್ಯಯಿಸಲು ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ತಿಂಗಳ ಗಡುವು ನೀಡಿದ್ದು, ಸೈನ್ಯಕ್ಕೆ ಬೇಕಾದ ಸಕಲ ಶಸ್ತ್ರಾಸ್ತ್ರ ಖರೀದಿ ಸೇರಿ ಹಲವು ಅಂಶಗಳಿಗೆ ಹಣ ವ್ಯಯಿಸಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷವೇ ಭಾರತ ಸೈನ್ಯದ ಮೂರು ವಿಭಾಗಗಳ ಬಲಪಡಿಸಲು ಆರ್ಥಿಕ ಸ್ವಾತಂತ್ರ್ಯ ನೀಡಿದ್ದು, ದೇಶದ ರಕ್ಷಣಾ ವಿಚಾರದಲ್ಲಿ ಯಾವುದೇ ರಾಜೀಯಾಗುವುದಿಲ್ಲ ಎಂಬ ಸಂದೇಶ ರವಾನಿಸಿತ್ತು. ಈಗ ಅದಕ್ಕೆ ಮುನ್ನುಡಿಯಾಗಿ ಹಣ ಬಿಡುಗಡೆ ಮಾಡಿದೆ. ಕಳೆದ ಎರಡು ದಿನಗಳಿಂದ ಪಾಕಿಸ್ತಾನಿ ಸೈನಿಕರು ಕಾಶ್ಮೀರದ ಗಡಿಯಲ್ಲಿ ಮಾಡಿದ ದಾಳಿಯಲ್ಲಿ ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ.
Leave A Reply