ಬಿಜೆಪಿ ಕಾರ್ಯಕರ್ತ ಸಂತೋಷ ಹತ್ಯೆಗೆ ಬಳಸಿದ್ದು ಸ್ಕ್ರೂ ಡ್ರೈವರ್ ಅಲ್ಲ ಚಾಕು.. ಎಲ್ಲಿದ್ದೀರಿ ಗೃಹ ಸಚಿವರೇ
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯ ಬ್ಯಾನರ್ ಕಟ್ಟುವ ವೇಳೆ ಬಿಜೆಪಿ ಕಾರ್ಯಕರ್ತ ಸಂತೋಷನ್ನು ಸ್ಕ್ರೂ ಡ್ರೈವರ್ ನಿಂದ ಕೊಲೆ ಮಾಡಲಾಗಿತ್ತು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಪೊಲೀಸರು ಗೃಹ ಸಚಿವರ ಹೇಳಿಕೆಗೆ ತದ್ವಿರುದ್ಧವಾದ ಮಾಹಿತಿ ಹೊರಹಾಕಿದ್ದು, ಸಂತೋಷ ಅವರನ್ನು ಕೊಲೆ ಮಾಡಿದ್ದು ಚಾಕುವಿನಿಂದ, ಕೊಲೆ ಮಾಡಲಾದ ಚಾಕುವನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಜ.31 ರಂದು ಬಿಜೆಪಿ ಕಾರ್ಯಕರ್ತ ಸಂತೋಷ್ ಅವರನ್ನು ಬ್ಯಾನರ್ ಕಟ್ಟುವ ವೇಳೆ ಜೆ.ಸಿ.ನಗರದಲ್ಲಿ ನಾಲ್ವರು ಆರೋಪಿಗಳು ಹತ್ಯೆಗೈದಿದ್ದರು. ಪ್ರಕರಣದ ಸಂಬಂಧ ಕೊಲೆ ಆರೋಪಿಗಳಾದ ಜೆ.ಸಿ.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದರ್ ಪುತ್ರ ವಾಸಿಂ, ಸಹಚರರಾದ ಫಿಲಿಪ್ಸ್, ಇರ್ಫಾನ್ ಮತ್ತು ಉಮ್ಮರ್ ಎಂಬುವವರನ್ನು ಬಂಧಿಸಲಾಗಿತ್ತು.
ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸಿಸಿಬಿಗೆ ವರ್ಗಾಯಿಸಿದ್ದರು. ಸಿಸಿಬಿ ತನಿಖೆ ವೇಳೆ ಆರೋಪಿಗಳು ಸ್ಕ್ರೂಡ್ರೈವರ್ ಬಳಸಿದ್ದಾಗಿ ಹೇಳಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಚಾಕು ಬಳಸಿರುವುದು ತಿಳಿದು ಬಂದಿತ್ತು. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಚಾಕು ಬಳಸಿದ್ದಾಗಿ ಬಾಯ್ಬಿಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಅಲ್ಲಿಯೇ ಕಟ್ಟಡದ ಮೇಲೆ ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
‘ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಕ್ರೂ ಡ್ರೈವರ್‌ನಿಂದ ಸಂತೋಷ್ ಕಾಲಿಗೆ ಚುಚ್ಚಿದ್ದಾಗ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ ಎಂದು ಹೇಳಿಕೆ ನೀಡಿದ್ದಾರೆ. ಅವರು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಇಡೀ ಕೊಲೆ ತಮ್ಮ ಕಣ್ಣೆದುರೆ ಆಗಿದೆ ಎಂಬಂತೆ ಬಿಂಬಿಸಿ ಕಥೆ ಕಟ್ಟಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಇದೀಗ ಅವರಿಗೆ ತಿರುಗುಬಾಣವಾಗಿದೆ.
Leave A Reply