ಯುದ್ಧ ಆಯ್ಕೆ ಅಲ್ಲ, ಅನಿವಾರ್ಯ!!
ಒಂದೇ ಮಾತಿನಲ್ಲಿ ಹೇಳುವುದಾದರೆ ಪಾಕಿಸ್ತಾನದ ಉಗ್ರರ ಉಪಟಳ ಜಾಸ್ತಿಯಾಗಿದೆ. ಪತ್ರಿಕೆಗಳಲ್ಲಿ ವಾರಕ್ಕೆ ಕನಿಷ್ಟ ಎರಡು ದಿನವಾದರೂ ಇಂತಹ ಸುದ್ದಿ ಬಂದೇ ಬರುತ್ತದೆ ಎನ್ನುವಂತಹ ವಾತಾವರಣ ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗಿದೆ. ನಮ್ಮ ಮೂರು ಜನ ಯೋಧರು ಹುತ್ಮಾತರಾದರು, ಇಬ್ಬರು ಉಗ್ರರನ್ನು ಹತ ಮಾಡಲಾಗಿದೆ, ಇಂತಹುದೇ ಸುದ್ದಿ. ಇವತ್ತು ಬೆಳಿಗ್ಗೆ ಪೇಪರ್ ತೆಗೆದಾಗಲೂ ಅದೇ ಸುದ್ದಿ. ನಮ್ಮ ಐದು ಜನ ಯೋಧರು ಹುತಾತ್ಮರಾದರು, ಮೂವರು ಉಗ್ರರು ಹತರಾಗಿದ್ದಾರೆ, ಹತ್ತು ಜನ ನಾಗರಿಕರು ಗಾಯಾಳಾಗಿದ್ದಾರೆ. ಇದೇ ಸುದ್ದಿ. ಒಂದು ವಿಷಯವಂತೂ ಸ್ಪಷ್ಟ. ಅವರ ಐದಲ್ಲ, ಹತ್ತು ಉಗ್ರರನ್ನು ನಾವು ಕೊಂದರೂ ಅವರಿಗೆ ಅದು ತೃಣ ಸಮಾನ. ಯಾಕೆಂದರೆ ಸತ್ತವರು ಅವರ ಊರಿನ ಇಲಿಗಳು. ಅವರಿಗೆ ಅದು ಲೆಕ್ಕವಲ್ಲ. ಒಂದು ಇಲಿ ಸತ್ತರೆ ಹತ್ತು ಇಲಿಗಳಿಗೆ ಅವರು ಜನ್ಮ ಕೊಡುತ್ತಾರೆ. ಇಲಿಗಳಿಗೆ ಮಾರ್ಗದರ್ಶನ ಕೊಡಲು ಅಲ್ಲಿ ಹೆಗ್ಗಣಗಳು ಇವೆ. ಆದ್ದರಿಂದ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಯಾವತ್ತಾದರೂ ನಿಮ್ಮ ಮನೆಯಲ್ಲಿ ಇಲಿ ಸತ್ತರೆ ತುಂಬಾ ಬೇಸರ ವ್ಯಕ್ತಪಡಿಸಿದ್ದಿರಾ, ಇಲ್ವಾಲ್ಲ. ಹಾಗೆ ಇದು. ಪಾಕಿಸ್ತಾನ ಸುರಂಗದ ಮೂಲಕ ಆಗಾಗ ಇಂತಹ ಇಲಿಗಳನ್ನು ನಮ್ಮ ದೇಶವೆಂಬ ಮನೆಗೆ ಕಳುಹಿಸುತ್ತಿರುತ್ತವೆ. ಅವು ಬಂದು ಕತ್ತಲೆಯಲ್ಲಿ ಕಾದು ನಮ್ಮ ಅಮೂಲ್ಯ ಸಂಪನ್ಮೂಲವನ್ನು ಮುರಾಮೋಸದಿಂದ ಮುಗಿಸಲು ಹೋಗುತ್ತವೆ. ಅವರ ನೂರು ಇಲಿಗಳು ನಮ್ಮ ಒಬ್ಬ ಯೋಧನಿಗೆ ಸಮನಲ್ಲ. ನಮ್ಮ ಒಬ್ಬ ಯೋಧ ಸತ್ತರೆ ಅದು ನಮಗಾಗುವ ಅಪಾರ ನಷ್ಟ. ಅದಕ್ಕೆ ಖಂಡನೆ ಸಾಕಾಗುವುದಿಲ್ಲ. ಹಾಗಿರುವಾಗ ನಮ್ಮ ಕೇಂದ್ರ ಸರಕಾರ ಒಂದು ನಿರ್ಧಾರಕ್ಕೆ ಬರಲೇಬೇಕಿದೆ.
ವಾರಕ್ಕೊಂದು ಸರ್ಜಿಕಲ್ ಸ್ಟ್ರೈಕ್ ಬೇಕು…..
ಯಾರೂ ಯುದ್ಧ ಬಯಸಬಾರದು ಎನ್ನುವುದು ನಾಣ್ಣುಡಿ. ಹಾಗಂತ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುವ ನೆರೆಮನೆಯವ, ಅನಗತ್ಯವಾಗಿ ನಮ್ಮನ್ನು ನೋಡಿ ಬೊಗಳುವ ನಾಯಿ ಇವುಗಳಿಗೆ ನಿವೊಂದು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅದು ನಿಮಗೆ ಯಾವತ್ತಿದ್ದರೂ ತಲೆನೋವು. ಇನ್ನೇನೂ ಒಳ್ಳೆಯ ನಿದ್ರೆ ಬರುತ್ತೆ ಎಂದಾಗ ನಿಮ್ಮ ಕಿವಿಯ ಬಳಿ ಬಂದು ಪದೇ ಪದೇ ಗಿಂಯ್ ಗುಟ್ಟುವ ಸೊಳ್ಳೆಯ ಕಾಟ ಕೊನೆಗಾಣಿಸಲು ನೀವೆನು ಮಾಡುತ್ತೀರಿ, ನಿಮ್ಮ ಎರಡು ಕೈಗಳನ್ನು ಬಳಸಿ ಒಂದು ಗ್ರಾಂಗಿಂತಲೂ ಕಡಿಮೆ ಭಾರ ಇರುವ ನುಸಿಯನ್ನು ಹತ್ಯೆ ಮಾಡಲು ಅಷ್ಟೂ ಬಲ, ಪೌರುಷವನ್ನು ಉಪಯೋಗಿಸುವುದಿಲ್ಲವಾ. ಯಾಕೆಂದರೆ ನಿಮಗೆ ಅದರ ಕಿರಿಕಿರಿ ಜಾಸ್ತಿಯಾಗಿರುತ್ತದೆ. ಅದನ್ನು ಮುಗಿಸಲೇಬೇಕೆಂಬ ಹಟ ಬಂದಿರುತ್ತದೆ. ಅದು ಕಚ್ಚಿದರೆ ಮಲೇರಿಯಾ ಬರಬಹುದು ಎನ್ನುವ ಆತಂಕ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆರಾಮವಾಗಿ ನಿಮ್ಮ ಪಾಡಿಗೆ ಮಲಗಿದ ನಿಮಗೆ ನಿದ್ರೆ ಮಾಡುವ ಅಗತ್ಯ ಇರುತ್ತದೆ
ಈಗ ಒಂದು ನುಸಿಯನ್ನು ಕೊಲ್ಲಲು ಸಮಯ ಬಂದಿದೆ. ನಮ್ಮ ರಾಷ್ಟ್ರದ ನಿದ್ರೆ ಕೆಡಿಸಲು ಕಿವಿಯ ಹತ್ತಿರ ಬಂದು ಗುಂಯ್ ಗುಟ್ಟುತ್ತಿರುವ ನುಸಿಯನ್ನು ಕೊಲ್ಲಲು ನಾವು ಎರಡು ಕೈಗಳನ್ನು ಒಟ್ಟು ಮಾಡಲೇಬೇಕಿದೆ. ಇನ್ನು ಕೂಡ ಹಾಗೆ ಇದ್ದು ಬಿಟ್ಟರೆ ಅವು ನಮಗೆ ಕಿರಿಕಿರಿ ಮಾಡುತ್ತಲೇ ಇರುತ್ತದೆ. ಆದರೆ ಈ ನುಸಿಗಳನ್ನು ಕೊಲ್ಲುವುದನ್ನು ಕೂಡ ಬೇಡಾ ಎನ್ನುವವರು ಇದ್ದಾರೆ. ಆ ಇಲಿಗಳನ್ನು ಕೊಲ್ಲುವುದು ಪ್ರಾಣಿ ಹಿಂಸೆ ಎನ್ನುವವರು ಇದ್ದಾರೆ. ನಿನ್ನೆ ಇದೇ ವಿಷಯದ ಮೇಲೆ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಪ್ಯಾನಲ್ ಡಿಸ್ಕಷನ್ ನಡೆಯುತ್ತಿತ್ತು. ಸಿಪಿಐ(ಎಂ) ಪಕ್ಷದ ಸುನೀತ್ ಚೋಪ್ಡಾ ಎನ್ನುವವರು ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಅವರನ್ನು ಕೊಲ್ಲುವುದು ಮಾನವಹಕ್ಕು ಉಲ್ಲಂಘನೆ ಎಂದು ವಾದಿಸುತ್ತಿದ್ದರು. ಹಾಗಾದರೆ ಅಲ್ಲಿನ ಉಗ್ರರು ನಮ್ಮ ಸೈನಿಕರ ಡೇರೆಯ ಮೇಲೆ ದಾಳಿ ಮಾಡಿ ನಮ್ಮ ಸೈನಿಕರನ್ನು ಕೊಂದರೆ ಅದು ಮಾನವ ಹಕ್ಕು ಎತ್ತಿ ಹಿಡಿದ ಹಾಗೆ ಆಗುತ್ತಾ?
ಯೋಧನ ವಿಷಯದಲ್ಲಿ ಪಕ್ಷ ಇಲ್ಲ..
ಇದು ಕಮ್ಯೂನಿಸ್ಟರ ವಾದ ಆದರೆ ಭಾರತೀಯ ಜನತಾ ಪಾರ್ಟಿಯವರು ಮಾತನಾಡಿದರೆ ನಮ್ಮ ಕೇಂದ್ರ ಸರಕಾರ ಸರ್ಜಿಕಲ್ ಸ್ಟೈಕ್ ಮಾಡಿದ್ದಾರೆ, ಕಳೆದ ವರ್ಷ 217 ಭಯೋತ್ಪಾದಕರು ಹತರಾಗಿದ್ದಾರೆ ಎನ್ನುತ್ತಿದ್ದಾರೆ. ಇದನ್ನೇ ಹೇಳಿ ಇನ್ನೆಷ್ಟು ದಿನ ಎಂದು ತೆಗೆಯುವುದು. ಅಲ್ಲಿ ನೋಡಿದರೆ ಕಾಂಗ್ರೆಸ್ಸಿಗರಿಗೆ ಮಾತನಾಡಲು ಇದೊಂದು ವಿಷಯ ಕೊಟ್ಟಂತೆ ಆಗಿದೆ. ತೀವ್ರ ಖಂಡನೆ ಮತ್ತು ಮೋದಿಯವರ ಎದೆಯಳತೆ ಹಿಡಿದು ಅವರು ವ್ಯಂಗ್ಯ ಮಾಡುತ್ತಿದ್ದಾರೆ. ನನಗೆ ನನ್ನ ರಾಷ್ಟ್ರದ ಸೈನಿಕರ ವಿಷಯದಲ್ಲಿ ರಾಜಕೀಯ ಯಾರು ಮಾಡಿದರೂ ಅದು ಖಂಡನಾರ್ಹ. ಸೈನಿಕ ಅಲ್ಲಿ ಗಡಿಯಲ್ಲಿ ದೇಶ ಕಾಯಲು ನಿಂತಾಗ ನಾನು ಬಿಜೆಪಿಯವರ ಜೀವ ರಕ್ಷಣೆಗೆ ನಿಂತಿದ್ದೇನೆ, ಕಾಂಗ್ರೆಸ್ ಪಕ್ಷದವರ ಜೀವ ಉಳಿಸಲು ನಿಂತಿದ್ದೇನೆ ಎಂದು ಅಂದುಕೊಂಡು ಗಡಿ ಕಾಯಲ್ಲ. ಅವನಿಗೆ ಯಾವ ಸರಕಾರ ಕೇಂದ್ರದಲ್ಲಿದೆ ಎನ್ನುವುದು ಮುಖ್ಯವೂ ಅಲ್ಲ. ಅವನಿಗೆ ಸರಿಯಾದ ಸೌಲಭ್ಯ ಕೊಟ್ಟು, ಅವನಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ಯಾರು ಅಧಿಕಾರದಲ್ಲಿದ್ದರೂ ಅವನಿಗೆ ಒಂದೇ. ಹಾಗಿರುವಾಗ ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ಸೈನಿಕರ ಪ್ರಾಣ ರಕ್ಷಣೆಗೆ ಚಿಂತಿಸಬೇಕಿದೆ. ನಾವು ವಾರ ವಾರ ಹತ್ತತ್ತು ಸೈನಿಕರನ್ನು ಹೀಗೆ ಕಳೆದುಕೊಳ್ಳುತ್ತಾ ಹೋದರೆ ಇದು ಕೇವಲ ಸಂಖ್ಯೆಯ ಲೆಕ್ಕವಾಗಿ ಉಳಿಯಲ್ಲ. ಇದು ನಮ್ಮ ದೇಶದ ಗೌರವದ ಪ್ರಶ್ನೆಯಾಗಿಯೂ ಮೂಡುತ್ತದೆ!
Leave A Reply