ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಮರಿಗೆ ಮೋದಿ ಸರ್ಕಾರ ನೀಡಿದ ಭರ್ಜರಿ ಉಡುಗೊರೆ ಯಾವುದು ಗೊತ್ತಾ?
ದೆಹಲಿ: ಕೇಂದ್ರ ಸರ್ಕಾರ ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಮರಿಗೆ ನೀಡುವ ಸಬ್ಸಿಡಿ ಕಡಿತಗೊಳಿಸಿ, ಆ ಹಣವನ್ನು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುವುದು ಎಂದು ಘೋಷಿಸಿದಾಗ ಕೆಲವು ಮತಿಗೇಡಿಗಳು ಇದು ಮುಸ್ಲಿಂ ವಿರೋಧಿ ನೀತಿ ಎಂದು ಬೊಬ್ಬೆ ಹಾಕಿದ್ದರು.
ಆದರೆ ಈಗ ಹಿಂದೆ ಬೊಬ್ಬೆ ಹಾಕಿದವರ ಹಾಗೂ ಮುಂದೆ ಹಾಕುವವರ ಬಾಯಿಗೆ ಬೀಗ ಹಾಕಿದ್ದು, ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಮರಿಗೆ ಭರ್ಜರಿ ಉಡುಗೊರೆ ನೀಡಿದೆ.
ಹೌದು, ವಿಮಾನದಲ್ಲಿ ಹಜ್ ಯಾತ್ರೆ ಕೈಗೊಳ್ಳುವವರು ಇದುವರೆಗೆ ನೀಡುತ್ತಿದ್ದ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರ ಅಪಾರ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಇದುವರೆಗೆ ಇದ್ದ ಗರಿಷ್ಠ ಮೊತ್ತವಾದ 97 ಸಾವಿರ ರೂಪಾಯಿಯನ್ನು ಕೇಂದ್ರ ಸರ್ಕಾರ ಕೇವಲ 20 ಸಾವಿರ ರೂಪಾಯಿಗೆ ಇಳಿಸಿದ್ದು, ಹಜ್ ಯಾತ್ರಿಕರಿಗೆ ಖುಷಿ ತಂದಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಇದು ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರವಾಗಿದ್ದು, ಹಜ್ ಯಾತ್ರೆ ಕೈಗೊಳ್ಳುವವರಿಗೆ ಇದು ಅನುಕೂಲ ಹಾಗೂ ಇದು ಕಾಂಗ್ರೆಸ್ ಸರ್ಕಾರ ನಡೆಸಿದ್ದ ಅಲ್ಪಸಂಖ್ಯಾತರ ಓಲೈಕೆ ಹಾಗೂ ಮನವೊಲಿಸುವ ರಾಜಕಾರಣದ ಅಂತ್ಯವೂ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.
ಈ ನಿರ್ಧಾರ ಪ್ರಧಾನ ಮಂತ್ರಿ ಕಚೇರಿಯಿಂದ ವಿಶೇಷ ಆಸಕ್ತಿಯಿಂದ ತೆಗೆದುಕೊಳ್ಳಲಾಗಿದ್ದು, ಯಾವುದೇ ಮನವೊಲಿಕೆ, ಷಡ್ಯಂತ್ರ ಇಲ್ಲದೆ ಜನರನ್ನು ಅಭಿವೃದ್ಧಿಗೊಳಿಸುವುದೇ ಕೇಂದ್ರ ಸರ್ಕಾರದ ಧ್ಯೇಯವಾಗಿದೆ ಎಂದು ನಖ್ವಿ ತಿಳಿಸಿದ್ದಾರೆ.
ದೇಶದ ಹಲವು ಭಾಗಗಳಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ಹಲವು ವ್ಯತ್ಯಾಸದಲ್ಲಿ ಗರಿಷ್ಠ ದರ ನಿಗದಿ ಮಾಡಲಾಗಿತ್ತು. ಈಗ ದರ ಕಡಿತದಿಂದ ಕಾಶ್ಮೀರದಿಂದ ಸೌದಿಗೆ ತೆರಳಲು ಇದ್ದ ವೆಚ್ಚ 1.98 ಲಕ್ಷ ರೂಪಾಯಿಯಿಂದ 1.01 ಲಕ್ಷ, ವಾರಣಸಿಯಿಂದ ಇದುವರೆಗೂ ಇದ್ದ 1.12 ಲಕ್ಷ ರೂಪಾಯಿಯಿಂದ 92 ಸಾವಿರ ರೂಪಾಯಿಗೆ ಇಳಿಸಲಾಗಿದೆ. ಇನ್ನೂ ಹಲವು ಭಾಗಗಳಿಂದ ಪ್ರಯಾಣಿಸುವ ದರವೂ ಕಡಿತವಾಗಲಿದೆ ಎಂದು ವಿವರಿಸಿದ್ದಾರೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪ್ರತಿ ವರ್ಷ ಸೌದಿ ಅರೇಬಿಯಾಗೆ ತೆರಳುವ ಮುಸ್ಲಿಮರಿಗೆ ಭಾರಿ ಅನುಕೂಲವಾಗಲಿದ್ದು, ಇದು ಕೇಂದ್ರ ಸರ್ಕಾರದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವಕ್ಕೂ ಅನ್ವಯವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
Leave A Reply