ಮೂರ್ತಿ ಧ್ವಂಸ ದುರದೃಷ್ಟಕರ, ದುಷ್ಕೃತ್ಯಗಳಿಗೆ ಬೆಂಬಲಿಸಬೇಡಿ ಬಿಜೆಪಿ ಮುಖಂಡರಿಗೆ ಅಮಿತ್ ಶಾ ಸೂಚನೆ
ದೆಹಲಿ: ದೇಶದಲ್ಲಿ ಮೂರ್ತಿ ಧ್ವಂಸ ಕುರಿತು ನಡೆಯುತ್ತಿರುವ ಕೃತ್ಯಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖಂಡಿಸಿದ್ದಾರೆ. ಇಂತಹ ಕೃತ್ಯಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಮುಖಂಡರು ಇಂತಹ ಕೃತ್ಯಗಳಿಗೆ ಬೆಂಬಲ ನೀಡಬಾರದು ಎಂದು ಸೂಚನೆ ನೀಡಿದ್ದಾರೆ.
ತ್ರಿಪುರಾದಲ್ಲಿ ಕಮ್ಯುನಿಸ್ಟ್ ಸಿದ್ಧಾಂತಿ ಲೇನಿನ್ ಮೂರ್ತಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಮೂರ್ತಿ ಧ್ವಂಸ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಜೆಪಿ ಮುಖಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ತ್ರಿಪುರಾ ಮತ್ತು ತಮಿಳುನಾಡಿನ ಬಿಜೆಪಿ ಘಟಕಗಳಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಅಮಿತ್ ಶಾ. ಮೂರ್ತಿ ಧ್ವಂಸ ಮಾಡುವ ಪ್ರಕ್ರಿಯೆ ದುರದೃಷ್ಟಕರ. ಇಂತಹ ಕಾರ್ಯಗಳಿಗೆ ಬಿಜೆಪಿ ಮುಖಂಡರು ಬೆಂಬಲ ನೀಡಬಾರದು ಎಂದು ಸೂಚನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಖಂಡನೆ
ದೇಶಾದ್ಯಂತ ಮೂರ್ತಿ ಧ್ವಂಸ ಕುರಿತು ನಡೆಯುತ್ತಿರುವ ಕೃತ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೇಂದ್ರ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರಗಳು ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
Leave A Reply