ಉರ್ವಾದ ಬಯೋಗ್ಯಾಸ್ ಘಟಕದಿಂದ ಉರಿಯುವುದು ಒಂದೇ ಟ್ಯೂಬ್ ಲೈಟ್!
22 ಲಕ್ಷ 42 ಸಾವಿರ ರೂಪಾಯಿ ಕಳೆದ ಆರು ವರ್ಷದಿಂದ ಹಾಗೆ ವೇಸ್ಟಾಗುತ್ತಿದೆ. ಇದನ್ನು ನಮ್ಮ ಮಂಗಳೂರು ಮಹಾನಗರ ಪಾಲಿಕೆ ಅಥವಾ ಶಾಸಕರು ನೋಡಿದ್ದಾರಾ? ಇನ್ನು ನೇರವಾಗಿ ಅಭಿವೃದ್ಧಿಯ ವಿಷಯಕ್ಕೆ ಬರೋಣ. ಇಲ್ಲ, ಒಬ್ಬ ಸಾಮಾನ್ಯ ನಾಗರಿಕ ಇಡೀ ಜೀವನ ದುಡಿದರೂ ಇಷ್ಟು ಹಣ ಒಟ್ಟು ಮಾಡುವುದು ಕಷ್ಟಸಾಧ್ಯ. ಹಾಗಿರುವಾಗ ನಾವು ನೀವು ಕಟ್ಟುವ ತೆರಿಗೆಯ ಹಣ ಹಾಗೆ ಮಂಗಳೂರಿನ ಉರ್ವಾ ಮಾರ್ಕೆಟಿನಲ್ಲಿ ದಂಡವಾಗಿ ಬಿದ್ದಿದೆಯಲ್ಲ, ಆ ಹಣಕ್ಕೆ ಒಂದು ವ್ಯವಸ್ಥೆ ಮಾಡಬೇಕಲ್ಲ.
2011 ರಲ್ಲಿ ಪಾಲಿಕೆ ಏನು ಮಾಡಿತು ಎಂದರೆ ಬಯೋ ಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆ ಮಾಡೋಣ ಎಂದು ನಿರ್ಧರಿಸಿತು. ಸರಿ, ಯಾವುದೇ ಯೋಜನೆ ಕೆಟ್ಟದ್ದಲ್ಲ ಅಥವಾ ಬಯೋ ಗ್ಯಾಸ್ ಘಟಕ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ನೀವು 22 ಲಕ್ಷ ರೂಪಾಯಿ ಹಾಕಿದ ನಂತರ ಅದಕ್ಕೆ ಸರಿಯಾಗಿ ವಿದ್ಯುತ್ ಉತ್ಪಾದಿಸಿ ಜನರಿಗೆ ಪೂರೈಕೆ ಮಾಡಿದ್ದರೆ ನಿಮ್ಮನ್ನು ಅಭಿನಂದಿಸಬಹುದಿತ್ತು. ಆದರೆ ಇವತ್ತಿನ ತನಕ ಆ ಬಯೋ ಗ್ಯಾಸ್ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ನಿಂದ ಘಟಕದ ಒಂದೇ ಒಂದು ಟ್ಯೂಬ್ ಲೈಟ್ ಕೂಡ ಉರಿಯುತ್ತಿಲ್ಲ. ಇಷ್ಟಾಗಿಯೂ ಪಾಲಿಕೆಗೆ ಸಮಾಧಾನ ಇಲ್ಲ. ಪ್ರತಿ ತಿಂಗಳು ಈ ಘಟಕದ ನಿರ್ವಹಣೆಗೆಂದು ನಲ್ವತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ. ಎಷ್ಟೋ ಕಡೆ ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಹಣ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದರೆ ಮತ್ತೊಂದೆಡೆ ಇದೇ ಪಾಲಿಕೆ ದಂಡಕ್ಕೆ 40 ಸಾವಿರ ಕೊಟ್ಟು ಬಿಳಿಯಾನೆಯನ್ನು ಸಾಕುತ್ತಿದೆ. ಹೆಚ್ಚು ಮಾತನಾಡಿದರೆ ಶಾಸಕರ ಬೆಂಬಲಿಗರಿಗೆ ಬೇಸರವಾಗುತ್ತದೆ. ಹಾಗಂತ ಮೊನ್ನೆ ಉರ್ವಾ ಮೈದಾನದ ಹತ್ತಿರ ಏನೋ ಗಿಡ ನೆಡಲು ಎಂದು ಶಾಸಕರು ಹೋಗಿದ್ದರಲ್ಲ, ಆಗ ಈ ಘಟಕಕ್ಕೂ ಭೇಟಿ ಕೊಟ್ಟಿದ್ದರೆ ಒಳ್ಳೆಯದಿತ್ತು.
ಒಂದು ಯೋಜನೆಗೆ ಹಣ ತರುವುದು ಮಾತ್ರ ಶಾಸಕರ ಜವಾಬ್ದಾರಿ ಅಲ್ಲ. ತನ್ನ ಕ್ಷೇತ್ರದಲ್ಲಿ ಆ ಯೋಜನೆಗೆ ಹಾಕಿದ ಹಣ ವೇಸ್ಟ್ ಆಗಿ ಹೋಗುತ್ತಿದೆಯೇನೊ ಎಂದು ಕೂಡ ನೋಡುವುದು ಅವರ ಧರ್ಮ. ಇಲ್ಲದಿದ್ದರೆ ಯೋಜನೆಗಳು ಇರುವುದು ತಮ್ಮ ಬೆಂಬಲಿಗ ಗುತ್ತಿಗೆದಾರರ ಕಿಸೆ ಮತ್ತು ತಮ್ಮ ಚುನಾವಣಾ ವೆಚ್ಚ ನೋಡಿಕೊಳ್ಳಲು ಎಂದಾಗುತ್ತದೆ. ಆವತ್ತು ಈ ಯೋಜನೆ ತರುವಾಗ ನಮ್ಮ ಪಾಲಿಕೆಯಲ್ಲಿ ದೂರದೃಷ್ಟಿಯ ಆಯುಕ್ತರು ಬಂದು ಅಧಿಕಾರ ನಡೆಸುತ್ತಿದ್ದರು. ಆದರೆ ಆಯುಕ್ತ ಹರೀಶ್ ಕುಮಾರ್ ತುಂಬಾ ವರ್ಷ ಮಂಗಳೂರಿನಲ್ಲಿ ಇದ್ದರೆ ಎಲ್ಲಾ ಅಭಿವೃದ್ಧಿ ಅವರೇ ಮಾಡಿ ನಂತರ ನಮಗೆ ಏನೂ ಕೆಲಸ ಉಳಿಯುವುದಿಲ್ಲ ಎಂದು ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಆವತ್ತು ಆಯುಕ್ತ ಹರೀಶ್ ಕುಮಾರ್ ಅವರದ್ದು ಏನು ಪ್ಲಾನ್ ಇತ್ತೆಂದ್ರೆ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ದಿನಕ್ಕೆ ಸುಮಾರು 200 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆ ವೇಸ್ಟ್ ಅನ್ನು ಹಾಗೆ ವೇಸ್ಟ್ ಮಾಡುವ ಬದಲು ಅದನ್ನು ಉಪಯೋಗಿಸಿ ವಿದ್ಯುತ್ ತಯಾರಿಸುವ ಎನ್ನುವ ಯೋಚನೆ ಬಂದಿತ್ತು. ಹಾಗೆ ಈ ಘಟಕ ಪ್ರಾರಂಭವಾಗಿತ್ತು. ಅವರು ಅತ್ತ ಹೋದ ನಂತರ ಇತ್ತ ಅದರ ಗುತ್ತಿಗೆ ಪಡೆದುಕೊಂಡಿರುವವರು ಪುನ: ಸೆಂಟ್ರಲ್ ಮಾರುಕಟ್ಟೆ ತನಕ ಹೋಗಲು ಆಲಸ್ಯವಾಗಿ ಅಲ್ಲಿಯೇ ಪಕ್ಕದ ಹರೇ ರಾಮ ಹರೇ ಕೃಷ್ಣ ಅವರ ಅಕ್ಷಯ್ ಪಾತ್ರೆಯ ವೇಸ್ಟ್ ತಂದು ಸುರಿದು ವಿದ್ಯುತ್ ಉತ್ಪಾದಿಸುತ್ತಾರೆ. ಇವರು ಉತ್ಪಾದಿಸಿದ ವಿದ್ಯುತ್ ನಿಂದ ಅವರ ಜನರೇಟರ್ ಮಾತ್ರ ಕೆಲಸ ಮಾಡುತ್ತದೆ. ಅಲ್ಲಿಗೆ ಕಲ್ಲಿನ ಮೇಲೆ ನೀರು ನಿತ್ಯ ಸುರಿದು ಅದನ್ನು ಮೆದು ಮಾಡುವ ಕೆಲಸ ನಡೆಯುತ್ತಿದೆ!
ಈ ಬಗ್ಗೆ ಈಗಿನ ಆಯುಕ್ತ ಮೊಹಮ್ಮದ್ ನಝೀರ್ ಅವರತ್ರ ಕೇಳಿದರೆ ಉತ್ತರ ಏನು ಗೊತ್ತಾ ” ಮೆಸ್ಕಾಂ ನಲ್ಲಿ ಟಾಕ್ ಆಗ್ತಾ ಇದೆ. ಫುಲ್ ಸ್ವಿಂಗ್ ನಲ್ಲಿ ಶುರು ಮಾಡುತ್ತೇವೆ” ಬಹುಶ: ಇಲೆಕ್ಷನ್ ಹತ್ತಿರ ಬರುವಾಗ ಶಾಸಕರಿಗೆ ನಿಂತು ಫೋಟೋ ತೆಗೆಯಲು ಒಂದಾದರೂ ಯೋಜನೆ ಬೇಕಲ್ಲ, ಬಹುಶ: ಅದಕ್ಕೆ ಆಯುಕ್ತರು ಚುನಾವಣೆಗೆ ಸರಿಯಾಗಿ ತಮಗೆ ಕೆಲಸ ಕೊಟ್ಟ ಧಣಿಗಳಿಗೆ ಉಪಕಾರವಾಗುವಂತೆ ಕೊನೆಯ ಘಳಿಗೆಯಲ್ಲಿ ಏನಾದರೂ ಮಾಡಲು ಕಾಯುತ್ತಾ ಇರಬಹುದು.
Leave A Reply