ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
ಸತತ ಎರಡು ಬಾರಿ ಮೈಸೂರು – ಕೊಡಗು ಸಂಸದರಾಗಿ ಕೆಲಸ ನಿರ್ವಹಿಸಿ, ಕೋಟ್ಯಾಂತರ ರೂಪಾಯಿ ಅನುದಾನ ತಂದು ಅಪಾರ ಅಭಿವೃದ್ಧಿಗೆ ಕಾರಣರಾಗಿದ್ದ ಪ್ರತಾಪ್ ಸಿಂಹ ಅವರಿಗೆ 2024ರಲ್ಲಿ
ಮೂರನೇ ಬಾರಿ ಭಾರತೀಯ ಜನತಾ ಪಾರ್ಟಿ ಟಿಕೆಟ್ ನೀಡಿರಲಿಲ್ಲ. ಆ ಕ್ಷೇತ್ರದಲ್ಲಿ ಮೈಸೂರಿನ ರಾಜರಾದ ಯದುವೀರ್ ಕೃಷ್ಣದತ್ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿ ಈಗ ಅವರು ಸಂಸದರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಪ್ರತಾಪ್ ಸಿಂಹ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದು, ಹೋರಾಟ, ಪ್ರತಿಭಟನೆ, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಸರಕಾರದ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸುತ್ತಾ ಲೈಮ್ ಲೈಟ್ ನಲ್ಲಿ ಇದ್ದಾರೆ. ಆಗೊಮ್ಮೆ ಈಗೊಮ್ಮೆ ಬಿಜೆಪಿಯ ಬಂಡಾಯಗಾರರ ಜೊತೆ ಕಾಣಿಸಿಕೊಂಡಿದ್ದರೂ, ಅಲ್ಲಿ ಸಕ್ರಿಯರಾಗಿದ್ದದ್ದು ಕಡಿಮೆ. ಹೀಗೆ ಒಂದೂವರೆ ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ ಜನಮನದಲ್ಲಿ ಇರುವ ಪ್ರತಾಪ ಸಿಂಹ ಅವರಿಗೆ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷೆ ಇದೆ. ಅದಕ್ಕೆ ಅನುಗುಣವಾಗಿ ಅವರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತೆ ಕಾಣಿಸುತ್ತದೆ.
ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರವನ್ನು ನನ್ನ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಚಾಮರಾಜ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದಾರೆ. ಇದು ಬಿಜೆಪಿ ಕ್ಷೇತ್ರ. ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ. ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ. ಬರಿ ಒಕ್ಕಲಿಗ ಲೆಕ್ಕದಲ್ಲಿಯೇ ಈ ಕ್ಷೇತ್ರ ನೋಡುತ್ತಿಲ್ಲ. ಇಲ್ಲಿ ಎಲ್ಲ ರೀತಿಯ ವರ್ಗದ ಜನರು ಇದ್ದಾರೆ. ಪ್ರಜ್ಞಾವಂತರು ಮತ್ತು ಬುದ್ಧಿವಂತರಿದ್ದಾರೆ. ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಇಲ್ಲಿ ಕಾಂಗ್ರೆಸ್ಸಿನ ಕೆ. ಹರೀಶ್ ಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018 ರಲ್ಲಿ ಬಿಜೆಪಿಯ ಎಲ್ ನಾಗೇಂದ್ರ ಇಲ್ಲಿ ಶಾಸಕರಾಗಿದ್ದರು. 2013 ರಲ್ಲಿ ಕಾಂಗ್ರೆಸ್ಸಿನ ವಾಸು ಇಲ್ಲಿ ಎಂಎಲ್ ಎ ಆಗಿದ್ದರು. ಅದರ ಹಿಂದಿನ ನಾಲ್ಕು ಬಾರಿ ಬಿಜೆಪಿಯ ಎಚ್. ಎಸ್. ಶಂಕರಲಿಂಗೇಗೌಡರು ಶಾಸಕರಾಗಿ ಇಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಎಲ್ ನಾಗೇಂದ್ರ ಅವರಿಗೆ 68837 ಮತಗಳು ದೊರಕಿದ್ದರೆ, ಕೆ ಹರೀಶ್ ಗೌಡರಿಗೆ 72931 ಮತಗಳು ದೊರಕಿದ್ದವು. ಸುಮಾರು ನಾಲ್ಕು ಸಾವಿರ ಚಿಲ್ಲರೆ ಮತಗಳಿಂದ ನಾಗೇಂದ್ರ ಸೋಲನ್ನು ಅನುಭವಿಸಿದ್ದರು. ಇನ್ನು ವಿಧಾನಸಭಾ ಚುನಾವಣೆಗೆ ಬಹುತೇಕ ಎರಡು ವರ್ಷ ಮೂರ್ನಾಕು ತಿಂಗಳಿವೆ. ಹೀಗಿರುವಾಗ ಪ್ರತಾಪ ಸಿಂಹ ಅಖಾಡಕ್ಕೆ ಧುಮುಕಿರುವುದು ಚಾಮರಾಜ ಕ್ಷೇತ್ರದ ರಾಜಕೀಯ ಈಗಲೇ ರಂಗೇರಲಿರುವ ಸಂಕೇತ. ಬಿಜೆಪಿಯ ಹೈಕಮಾಂಡ್ ಅಲ್ಲಿಂದ ಸಿಂಹರಿಗೆ ಟಿಕೆಟ್ ಕೊಡುತ್ತದಾ? ಇಲ್ವಾ? ಎನ್ನುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಆದರೆ ರಾಜಕೀಯದ ಭೂಮಿಯನ್ನು ಹದ ಮಾಡಿಕೊಳ್ಳಲು ಪ್ರತಾಪ್ ಸಿಂಹ ಈಗಲೇ ರಣಕಹಳೆ ಮೊಳಗಿಸಿರುವುದು ಅವರ ಮುಂದಿನ ರಾಜಕೀಯ ಭವಿಷ್ಯದ ಮುನ್ಸೂಚನೆ.









